ಸೆ.22ರಿಂದ ಮಂಗಳೂರು ದಸರಾ ವೈಭವ, ಜನಾರ್ದನ ಪೂಜಾರಿಯವರ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ

aaaaa
Published on

ಮಂಗಳೂರು:ರಾಜ್ಯದಲ್ಲೇ ವಿಶಿಷ್ಠವಾಗಿ ಮನಸೂರೆಗೊಳ್ಳುವ ಮಂಗಳೂರು ದಸರಾ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸೆ.22ರಂದು ಅಕ್ಟೋಬರ್ 3ರವರೆಗೆ ನಡೆಯಲಿದೆ. ವೈದಿಕ ಪರಂಪರೆ, ಧಾರ್ಮಿಕ ಶ್ರದ್ಧೆ, ಸಂಸ್ಕೃತಿಯ ಸಂಭ್ರಮ, ಸಂಗೀತದ ಸಪ್ತಸ್ವರ, ಕಲೆ, ಸಾಹಿತ್ಯ, ಕ್ರೀಡೆಸಾಧನೆಗಳ ಏಕತೆಯ ಸಮನ್ವಯ ನವದುರ್ಗೆಯ ಆರಾಧನೆಯ ಭವ್ಯ ದಸರಾ ಈ ಬಾರಿಯ ವಿಶೇಷತೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.22ರಂದು ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಪುಣ್ಯಾಹ ಹೋಮ ನವಕಲಶಾಭಿಷೇಕ ನಡೆದು ಮಧ್ಯಾಹ್ನ 12ಗಂಟೆಗೆ ನವದುರ್ಗೆಯರು, ಮಹಾಗಣಪತಿ ಹಾಗೂ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯೊಂದಿಗೆ ಪ್ರಾರಂಭಗೊಂಡು ಅ.3ರ ತನಕ ಕ್ಷೇತ್ರದ ಅಭಿವೃದ್ಧಿಯ ರುವಾರಿ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ವಿವಿಧ ಕಾರ್ಯಕ್ರಮದೊಂದಿಗೆ ವಿಜೃಂಬನೆಯಿಂದ ನಡೆಯಲಿದೆ.

ದೇವಸ್ಥಾನದ ಓಳಾಂಗಣದ ಮೇಲ್ಛಾವಣಿ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಹೊಸಮಾದರಿಯಲ್ಲಿ ನವೀಕರಣಗೊಂಡಿದ್ದು, ಸೆ.21ರಂದು ಸಂಜೆ ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದಾರೆ. ಸೆ.22ರಂದು ಬೆಳಗ್ಗೆ 11.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಮಂಗಳೂರು ರಾಮಕೃಷ್ಣ ಮಿಶನ್‌ನ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿ ಜೀ ಅವರ ದಿವ್ಯಹಸ್ತದಿಂದ ಬಿ.ಜನಾರ್ದನ ಪೂಜಾರಿಯವರ ಸಮ್ಮುಖದಲ್ಲಿ ಚಾಲನೆಗೊಳ್ಳಲಿದೆ. ಸೆ.22ರಂದು ಸಾಂಸ್ಕೃತಿಕ ಕಾರ್ಯಕ್ರಮ ಎನ್‌ಎಂಪಿಎ ಚೇರ್ಮನ್ ಡಾ.ವೆಂಕಟರಮಣ್ ಅಕ್ಕಚ್ಚುರಾಜು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ವಲಯ ಮುಖ್ಯಸ್ಥ ರಾಜೇಂದರ್ ಕುಮಾರ್ ಉದ್ಘಾಟಿಸಲಿದ್ದಾರೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಸಾನಿಧ್ಯ ವಿಶೇಷ ಶಾಲೆ ಮಂಗಳೂರು, ವೈಟ್‌ಡೌಸ್ ಮಂಗಳೂರು, ಎಂ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್‌ನ ಸೇವೆಯನ್ನು ಗುರುತಿಸಿ ಈ ಸಂದರ್ಭ ಪುರಸ್ಕರಿಸಲಾಗುವುದು. ಭರತನಾಟ್ಯದಲ್ಲಿ ಗೊಲ್ಡನ್‌ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾದನೆಗೈದ ರೆಮೋನಾ, ದೀಕ್ಷಾ ಸುವರ್ಣ ಅವರನ್ನು ಗೌರವಿಸಲಾಗುವುದು ಎಂದರು.

ಸೆ.25ರಂದು ಸಂಜೆ 6ಗಂಟೆಗೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಲೋಕಸಭೆ ಸದಸ್ಯ, ಎಐಸಿಸಿಯ ಕೆ.ಸಿ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವರು ದಿನೇಶ್ ಗುಂಡೂರಾವ್ ಹಾಗೂ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಜನಪ್ರತಿನಿಧಿಗಳು, ಗಣ್ಯರ ಉಪಸ್ಥಿತಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಸೆ.28ರಂದು ಬೆಳಗ್ಗೆ 9ಕ್ಕೆ ಸಾಮೂಹಿಕ ಚಂಡಿಕಾ ಹೋಮ ನೆರವೇರಲಿದೆ ಎಂದರು.

------------------

ದಸರಾ ಸಾಹಿತ್ಯ ವೈಭವ

ಸೆ.23ರಂದು ಸಂಜೆ 4ರಿಂದ 6ರವರೆಗೆ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಸಹಯೋಗದದಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಬಿ.ಮುರಾರಿ ತಂತ್ರಿ (ಸಂಸ್ಕೃತ), ಮನೋಜ್ ಕುಮಾರ್ (ಕನ್ನಡ), ವಿನೋದ ಮೂಡುಗದೆ(ಅರೆಭಾಷೆ), ಹಂಝಾ ಮಲಾರ್ (ಬ್ಯಾರಿ), ಜೊನ್ಸಿ ಪಿಂಟೋ (ಕೊಂಕಣಿ), ವೆಂಕಟೇಶ್ ನಾಯಕ್ (ಕೊಂಕಣಿ), ಡಾ ಸುರೇಶ್ ನೆಗಳಗುಳಿ (ಹವ್ಯಕ), ಡಾ.ಅಣ್ಣಯ್ಯ ಕುಲಾಲ್ (ಕುಂದಗನ್ನಡ), ಬಾಬು ಕೊರಗ ಪಾಂಗಾಳ (ಕೊರಗಭಾಷೆ), ಕವಿತಾ ಅಡ್ಡೂರು (ಶಿವಳ್ಳಿ ತುಳು), ಗೀತಾ ಲಕ್ಷ್ಮೀಶ ಶೆಟ್ಟಿ(ತುಳು) ಕವನ ವಾಚಿಸಲಿದ್ದಾರೆ. ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆಯುವ ತುಳು ಭಾಷಾ ಕವಿಗೋಷ್ಠಿಯಲ್ಲಿ ರೂಪಕಲಾ ಆಳ್ವ, ಗಣೇಶ್ ಪ್ರಸಾದ್ ಪಾಂಡೇಲ್, ಅಶೋಕ ಎನ್. ಕಡೇಶಿವಾಲಯ, ಸದಾನಂದ ನಾರಾವಿ, ದೊಂಬಯ್ಯ ಇಡ್ಕಿದು, ಶಶಿಕಲಾ ಭಾಸ್ಕರ್ ಬಾಕ್ರಬೈಲ್, ಪ್ರಮೀಳಾ ದೀಪಕ್ ಪೆರ್ಮುದೆ ಕವನ ವಾಚಿಸಲಿದ್ದಾರೆ. ಅಂಚೆ ಮುಖೇನ ನಡೆಸಲಾದ ಕವನ ಸ್ಪರ್ಧೆಗೆ ಅತ್ಯುತ್ತಮ ಬೆಂಬಲ ದೊರೆತಿತ್ತು. ಆಯ್ದ ಕವನಗಳನ್ನು ಒಳಗೊಂಡ ಕವನ ಸಂಕಲನ ಮುದ್ರಣಗೊಂಡು ಈ ಸಂದರ್ಭ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net