

ಬೆಳಗಾವಿ: ಕಷ್ಟ ಬಂದಾಗ ದಂಪತಿ ಧೃತಿಗೆಡದೆ ಪರಸ್ಪರ ಸಮಾಲೋಚನೆ ಮಾಡುತ್ತ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಯಡಿಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಶನಿವಾರ ಅಪ್ರತಿಮ ವಾಗ್ಮಿ ಪದ್ಮಾವತಿ ಷಣ್ಮುಖಪ್ಪ ಅಂಗಡಿ ಅವರ 64ನೆಯ ಸ್ಮರಣೆಯಲ್ಲಿ ಹಮ್ಮಿಕೊಂಡ ‘ಮಹಿಳಾ ರತ್ನ ಹಾಗೂ ಆದರ್ಶ ದಂಪತಿ’ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬರುವ ಸೆ.1ರಿಂದ ರಾಜ್ಯಾದ್ಯಂತ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ತತ್ತ್ವಆದರ್ಶಗಳನ್ನು ನಾಡಿನ ಜನತೆಗೆ ತಿಳಿಸುವ ದೃಷ್ಟಿಯಿಂದ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ನಾಡಿನ ಜನತೆ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಕರೆ ನೀಡಿದರು.
ಆದರ್ಶ ದಂಪತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಟ ಕೆ.ವಿ.ನಾಗರಾಜ, ಭಾರತ ಕೇವಲ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಅರಣ್ಯದಲ್ಲಿ ವಾಸಿಸುವ ಬುಡಕಟ್ಟು ಜನಾಂಗ ಸೇರಿದಂತೆ ಸರ್ವ ಜನಾಂಗದ ಶಾಂತಿ ತೋಟ ಎಂದರು.
ಮಹಿಳಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಹಿಂದುಸ್ತಾನಿ ಗಾಯಕಿ ರೋಹಿಣಿ ಗಂಗಾಧರಯ್ಯ ಕರಜಗಿಮಠ, ಸಂಗೀತ ಕಲಿಯಲು ಯಾವುದೇ ಜಾತಿ ಮತಗಳ ಬೇಧವಿಲ್ಲ. ಸಂಗೀತವೂ ನಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಟ ಕೆ.ವಿ. ನಾಗರಾಜ ಮೂರ್ತಿ ಧರ್ಮಪತ್ನಿ ಎಸ್.ಜಿ ತುಂಗರೇಣುಕ, ಹಿರಿಯ ಸಾಹಿತಿ ಸುನಂದ ಎಮ್ಮಿ, ಕಲ್ಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಉಜ್ವಲ ಹಿರೇಮಠ ಇತರರಿದ್ದರು.