

ಕಂಪ್ಲಿ: ಮಹಿಳೆ ಕೇವಲ ಗೃಹಿಣಿಯಾಗದೆ, ಸ್ವ ಉದ್ಯೋಗ ಮೂಲಕ ಆರ್ಥಿಕ ಸ್ವಾವಲಂಬನೆಯೊಂದಿಗೆ, ಮಿತವ್ಯಯ ಸಾಧಿಸುವ ಮೂಲಕ ಆರ್ಥಿಕ ಸಾಕ್ಷರಳಾಗಬೇಕಿದೆ ಎಂದು ರಾಮಸಾಗರ ಗ್ರಾಪಂ ಮಾಜಿ ಅಧ್ಯಕ್ಷ ಬಿ.ನಾರಾಯಣಪ್ಪ ಹೇಳಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಸೂಕ್ತ ತರಬೇತಿ ಪಡೆದು ಸ ್ವಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಸಬಲತೆ ಸಾಧಿಸಬೇಕು. ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕೆ ಬಳಸುವ ಮೂಲಕ ಸಕಾಲದಲ್ಲಿ ಸಾಲದ ಕಂತುಗಳನ್ನು ಪಾವತಿಸಿ ಯಶಸ್ವಿ ಸ್ವಉದ್ಯೋಗಿಯಾಗಬೇಕು ಎಂದು ಸಲಹೆ ನೀಡಿದರು.
ಎಸ್‌ಕೆಡಿಆರ್‌ಡಿಪಿ ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಮಾತನಾಡಿ, ತಾಲೂಕಿನ 33 ಗ್ರಾಮಗಳಲ್ಲಿ 2611 ಸ್ವಸಹಾಯ ಸಂಘಗಳಿದ್ದು, 22,497 ಸದಸ್ಯರು ಪಾಲ್ಗೊಂಡು 10.53 ಕೋಟಿ ರೂ. ಉಳಿತಾಯ ಸಾಧಿಸಿದ್ದಾರೆ ಎಂದರು.
ಪಾಠಶಾಲೆ ಮಾಜಿ ಅಧ್ಯಕ್ಷ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಪ್ರಮುಖರಾದ ಎಚ್.ಕೆ.ಗಿರಡ್ಡಿ, ಕೆ.ಎಂ.ಹೇಮಯ್ಯಸ್ವಾಮಿ, ವಾಗೀಶ್, ಎಂ.ಸುಧೀರ್, ಡಾ.ವೆಂಕಟೇಶ, ಇ.ಸಚಿನ್, ಷಣ್ಮುಖಪ್ಪ, ಉಮಾಮಹೇಶ್ವರಿ, ಎಂ.ಎ.ಹಾಲಪ್ಪ, ಸಂಜುಕುಮಾರ್, ರೇಖಾ ಇತರರಿದ್ದರು.