

ಸಿಂಧನೂರು: ಶಿಸ್ತುಬದ್ಧ ಸಮಾಜ ನಿರ್ಮಾಣ ಮಾಡುವಲ್ಲಿ ಆರ್‌ಎಸ್‌ಎಸ್ ಕೊಡುಗೆ ಅಪಾರವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ವಿಭಾಗ ಪ್ರಮುಖ ಕೃಷ್ಣ ಜೋಷಿ ಹೇಳಿದರು.
ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜಯ ದಶಮಿ ಪಥ ಸಂಚಲನ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಸ್ತಕಗಳನ್ನು ಓದುವುದರಿಂದ ಆರ್‌ಎಸ್‌ಎಸ್ ಅರ್ಥವಾಗುವುದಿಲ್ಲ. ಅದನ್ನು ಅರಿಯಲು ಆರ್‌ಎಸ್‌ಎಸ್ ಜತೆ ಒಡನಾಟ ಅಗತ್ಯ. ಬಡವರು, ತುಳಿತಕ್ಕೊಳಗಾದ, ನಿರ್ಲಕ್ಷ್ಯಿಸಿದ ಮತ್ತು ವಂಚಿತ ವರ್ಗಗಳ ಉನ್ನತಿಗೆ ಸಂಘವು ಬದ್ಧವಾಗಿದೆ. ಸಂಘವು ತನ್ನ ದೈನಂದಿನ ಶಾಖೆಗಳಲ್ಲಿ ಉತ್ತಮ ಸಂಸ್ಕಾರಗಳನ್ನು ಅಳವಡಿಸುತ್ತದೆ ಎಂದರು.
ವಿಜಯದಶಮಿ ಮಹತ್ವದ್ದಾಗಿದೆ. ಇದು ದುಷ್ಟರ ವಿರುದ್ಧ ಒಳಿತಿನ ವಿಜಯದ ಸಂಕೇತವಾಗಿದೆ. ದೇಶದ ಮುಂದಿರುವ ಎಲ್ಲ ಸವಾಲು ಹಾಗೂ ತೊಂದರೆಗಳನ್ನು ನಿವಾರಣೆ ಮಾಡಲು ಸಂಘ ಅಖಂಡವಾಗಿ ನಿಂತಿದೆ. ಸಂಘದ ಸ್ವಯಂ ಸೇವಕರಿಗೆ ಸಂಸ್ಕಾರ ನೀಡುವ ಜತೆಗೆ ಅವರಿಗೆ ದೇಶ ಸೇವೆ ಬಗ್ಗೆ ಅರ್ಥೈಹಿಸುವ ಕೆಲಸ ಮಾಡುತ್ತಿದೆ. ನಾನು ಹಿಂದು ಎಂದೇಳುವ ಎದೆಗಾರಿಕೆ ಬೆಳೆಸಿದ್ದು ಆರ್‌ಎಸ್‌ಎಸ್. ನಿನ್ನ ದೇವರು ಕನಿಷ್ಠ, ನನ್ನ ದೇವರು ಮೇಲು ಎನ್ನುವ ಮನೋಭಾವ ಬದಲಾಗಬೇಕು. ಇದು ಸಮಾಜಕ್ಕೆ ಕಂಠಕ. ವಿಚಾರವಾಧಿಗಳು ಶ್ರೀರಾಮ, ಸೀತೆ, ಶಿವ ಹಾಗೂ ಹನುಮಂತನ ಬಗ್ಗೆ ತಪ್ಪಾಗಿ ಬಿಂಬಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು. ಬುದ್ಧಿಮಾಂಧ್ಯ ಮಕ್ಕಳ ಶಾಲೆಯ ಮುಖಸ್ಥ ಹಾಲಯ್ಯ ಹಿರೇಮಠ ಇದ್ದರು.
ಪಥ ಸಂಚಲನ: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಉತ್ಸವ ಅಂಗವಾಗಿ ಪಥಸಂಚಲನ ನಡೆಯಿತು. ಆರ್‌ಜಿಎಂ ಶಾಲಾ ಆವರಣದಿಂದ ಪ್ರಾರಂಭವಾಗಿ ಗಾಂಧಿ ವೃತ್ತ, ಬಸವ ವೃತ್ತ, ಮಹಾವೀರ ರಸ್ತೆಯ ಮೂಲಕ ಕಿತ್ತೂರ ರಾಣಿ ಚನ್ನಮ್ಮ ವೃತ್ತ ಹಾಗೂ ಕನಕ ವೃತ್ತದ ಮೂಲಕ ಮುಖ್ಯ ರಸ್ತೆಯ ಮೂಲಕ ಸಾಗಿ ಪುನಃ ಆರ್‌ಜಿಎಂ ಶಾಲಾ ಆವರಣಕ್ಕೆ ತಲುಪಿತು. ದಾರಿಯುದ್ದಕ್ಕೂ ಜನರು ಪುಷ್ಪ ಹಾಕಿ, ದೇಶ ಪ್ರೇಮ ಮೆರೆದರು.