ಧರ್ಮಾಚರಣೆಯಿಂದ ಬದುಕು ವಿಕಾಸ

25Jaggu7
ಬೆಳಗಾವಿ ತಾಲೂಕಿನ ಮುತ್ನಾಳ ಹಿರೇಮಠದಲ್ಲಿ ಲಿಂ.ಕೇದಾರ ಶಾಂತಲಿಂಗ ಜಗದ್ಗುರುಗಳ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು, ಕೇದಾರ ಭೀಮಾಶಂಕರ ಜಗದ್ಗುರುಗಳು. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಿವಸಿದ್ದರಾಮೇಶ್ವರ ಸ್ವಾಮೀಜಿ, ಶಿರಕೋಳ ಗುರುಸಿದ್ದೇಶ್ವರ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
Published on

ಬೆಳಗಾವಿ: ಸತ್ಯ ಶುದ್ಧ ಧರ್ಮಾಚರಣೆಯಿಂದ ಬದುಕು ವಿಕಾಸಗೊಳ್ಳುವುದು ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ತಾಲೂಕಿನ ಮುತ್ನಾಳ ಹಿರೇಮಠದಲ್ಲಿ ಬುಧವಾರ ಲಿಂ.ಕೇದಾರ ಶಾಂತಲಿಂಗ ಜಗದ್ಗುರುಗಳ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅಶಾಂತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಧರ್ಮವೊಂದೇ ಆಶಾಕಿರಣ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಧರ್ಮದಲ್ಲಿ ಆದರ್ಶ ಮೌಲ್ಯ ಕಾಣುತ್ತೇವೆ. ಅವರವರ ಧರ್ಮ ಅವರಿಗೆ ಶ್ರೇಷ್ಠ. ಆದರೆ, ಇನ್ನೊಂದು ಧರ್ಮದವರೊಂದಿಗೆ ಸಹಿಷ್ಣುತಾ ಮನೋಭಾವನೆಯಿಂದ ನಡೆದು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದದ್ದು ಎಲ್ಲರ ಧರ್ಮ ಎಂದರು.

ಸಾನ್ನಿಧ್ಯ ವಹಿಸಿದ್ದ ಕೇದಾರ ಭೀಮಾಶಂಕರ ಜಗದ್ಗುರುಗಳು ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಮೂರು ಋಣ ತೀರಿಸಲೇಬೇಕು. ಹೆತ್ತ ತಂದೆ-ತಾಯಿಗಳ ಋಣ ಮತ್ತು ಗುರು ಋಣ ತೀರಿಸಬೇಕು. ಮುತ್ನಾಳ ಗ್ರಾಮ ಚಿಕ್ಕದಾದರೂ ಭಕ್ತರ ಭಕ್ತಿ ದೊಡ್ಡದು. ಕೇದಾರ ಶಾಂತಲಿಂಗ ಜಗದ್ಗುರುಗಳನ್ನಾಗಿ ಮಾಡಿದ ಕೀರ್ತಿ ರಂಭಾಪುರಿ ವೀರಗಂಗಾಧರ ಜಗದ್ಗುರುಗಳಿಗೆ ಸಲ್ಲುತ್ತದೆ. ಇಂದು ಅವರ ಮೂರ್ತಿ ಪ್ರತಿಷ್ಠಾಪನಾ ಸಂದರ್ಭದಲ್ಲಿ ಇಂದಿನ ರಂಭಾಪುರಿ ಜಗದ್ಗುರುಗಳು ಆಗಮಿಸಿರುವುದು ಉಭಯ ಪೀಠಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಬಹಳ ಮುಖ್ಯ. ಅರಿವು ಆದರ್ಶಗಳನ್ನು ಬೆಳೆಸುವ ಗುರುವಿನ ಜವಾಬ್ದಾರಿ ಮಹತ್ವವಾದದ್ದು. ಲಿಂ. ಕೇದಾರ ಶಾಂತಲಿಂಗ ಜಗದ್ಗುರುಗಳ ಜನ್ಮ ಭೂಮಿ ಮುತ್ನಾಳದಲ್ಲಿ ಬಹು ದೊಡ್ಡ ಕಾರ್ಯಕ್ರಮ ಸಂಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಮುತ್ನಾಳ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಬಹು ದಿನಗಳ ಕನಸು ನನಸಾಗಿದೆ. ಉಭಯ ಜಗದ್ಗುರುಗಳು ಆಗಮಿಸಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ್ದು ಈ ಭಾಗದ ಭಕ್ತರ ಸೌಭಾಗ್ಯ ಎಂದರು.

ಸುಳ್ಳ ಶಿವಸಿದ್ದರಾಮೇಶ್ವರ ಸ್ವಾಮೀಜಿ, ಶಿರಕೋಳ ಗುರುಸಿದ್ದೇಶ್ವರ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ರಂಭಾಪುರಿ ಮತ್ತು ಕೇದಾರ ಜಗದ್ಗುರು ಅವರ ಸಾರೋಟ ಮೆರವಣಿಗೆ ಮೂಲಕ ಭಕ್ತಿಯಿಂದ ಬರಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net