ರಾಜಸ್ಥಾನದಿಂದ ಆಗಮಿಸಿದವರಿಗೆ ಕ್ವಾರಂಟೈನ್

3ckd01-Web
ರಾಜಸ್ಥಾನದಿಂದ ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕಿನ ಕುಟುಂಬಸ್ಥರು ಬಂದಿರುವ ಖಾಸಗಿ ಬಸ್ ಚೆಕ್‌ಪೋಸ್ಟ್‌ನಲ್ಲಿ ನಿಂತಿರುವುದು.
Published on

ಚಿಕ್ಕೋಡಿ: ರಾಜಸ್ಥಾನದಿಂದ ಊರಿಗೆ ಬಂದಿದ್ದ ಎರಡು ಕುಟುಂಬದ 38 ಜನರನ್ನು ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ತಡೆದ ಪೊಲೀಸ್ ಅಧಿಕಾರಿಗಳು, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ.

ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕಿನಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ಸೇರಿ ಕಳೆದ ಮಾ. 18ರಂದು ರಾಜಸ್ಥಾನದ ಅಜಮೇರ್ ದರ್ಗಾಕ್ಕೆ ಹೋಗಿದ್ದ ಎರಡು ಕುಟುಂಬದ 38 ಜನರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿಕೊಂಡಿದ್ದರು. ಇದೀಗ ಅಲ್ಲಿನ ಜಿಲ್ಲಾಧಿಕಾರಿ ಅನುಮತಿ ಪಡೆದು ಖಾಸಗಿ ಬಸ್ ಮೂಲಕ ಮಹಾರಾಷ್ಟ್ರ ಮಾರ್ಗವಾಗಿ ಆಗಮಿಸುತ್ತಿದ್ದರು. ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಇವರನ್ನು ತಡೆದ ಪೊಲೀಸರು, ಊರಿಗೆ ತೆರಳಲು ಬಿಡಲಿಲ್ಲ.

ರಸ್ತೆಯಲ್ಲೇ ಒಂದು ದಿನ ವಾಸ್ತವ್ಯ: ಅಜಮೇರ್ ಡಿಸಿಯಿಂದ ಪರವಾನಗಿ ಪಡೆದು ವೈದಕೀಯ ಪರೀಕ್ಷೆಗೊಳಪಟ್ಟು, ಏ. 30ರಂದು ಖಾಸಗಿ ವಾಹನದ ಮೂಲಕ ಅಲ್ಲಿಂದ ಹೊರಟು ಮೇ 2ರಂದು ಬೆಳಗ್ಗೆ 11ಗಂಟೆಗೆ ನಿಪ್ಪಾಣಿಗೆ ಆಗಮಿಸಿದ್ದರು. ಆದರೆ, ಮಹಾರಾಷ್ಟ್ರದಿಂದ ಬರುವ ಯಾವುದೇ ವಾಹನಕ್ಕೂ ಕರ್ನಾಟಕ ಪ್ರವೇಶ ನಿಷೇಧವಿದೆ. ಹೀಗಾಗಿ ಶನಿವಾರ ಬೆಳಗ್ಗೆಯಿಂದ ಅವರು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು.

ಪೊಲೀಸರು ಚೆಕ್‌ಪೋಸ್ಟ್ ದಾಟಲು ನಮಗೆ ಅವಕಾಶ ನೀಡಿಲ್ಲ. ಇದರಿಂದ ಒಂದು ದಿನ ನಾವೆಲ್ಲರೂ ಆಹಾರ ಇಲ್ಲದೆ ಸಮಸ್ಯೆ ಅನುಭವಿಸುವಂತಾಯಿತು. ನಮ್ಮ ಸಂಬಂಧಿಕರು ಊಟ, ಉಪಾಹಾರ ಕೊಡಲು ಬಂದರೂ ಅವರಿಗೆ ಅವಕಾಶ ಕೊಡದೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಚೆಕ್‌ಪೋಸ್ಟ್ ಬಳಿಯೇ ಉಳಿದಿದ್ದ ಕುಟುಂಬಸ್ಥರು ಆರೋಪಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವ ಯಾವುದೇ ವಾಹನ ಅಥವಾ ಜನರಿಗೆ ಬೆಳಗಾವಿ ಗಡಿ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹೀಗಾಗಿ ನಿಯಮಾನುಸಾರ ಇವರನ್ನು ಇಲ್ಲಿಯೇ ತಡೆ ಹಿಡಿದಿದ್ದೇವೆ. ಅಲ್ಲದೆ, ಜಿಲ್ಲಾಧಿಕಾರಿಗಳ ಆದೇಶದನ್ವಯ ಎಲ್ಲ 38 ಜನರನ್ನೂ ಹುಕ್ಕೇರಿಯ ವಸತಿ ನಿಲಯವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ.| ಸಂತೋಷ ಎಸ್. ನಿಪ್ಪಾಣಿ ಸಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net