

ಕುಷ್ಟಗಿ: ಹುಚ್ಚುನಾಯಿ ಕಡಿತದಿಂದ ಬರುವ ರೇಬಿಸ್ ರೋಗ ಮಾರಣಾಂತಿಕವಾಗಿದೆ. ಮುಂಜಾಗ್ರತೆ ವಹಿಸುವ ಮೂಲಕ ರೋಗ ಬರದಂತೆ ಎಚ್ಚರಿಕೆ ವಹಿಸಿ ಎಂದು ಪಶು ಪಾಲನಾ ಇಲಾಖೆಯ ಹಿರಿಯ ಪಶು ವೈದ್ಯಾಧಿಕಾರಿ ಸಿದ್ದಲಿಂಗಯ್ಯ ಶಂಕೀನ್ ಹೇಳಿದರು.
ಸೆ.28ರಂದು ಆಚರಿಸಲಾಗುವ ವಿಶ್ವ ರೇಬಿಸ್ ದಿನಾಚರಣೆ ನಿಮಿತ್ತ ಪಟ್ಟಣದ ಅನ್ನದಾನೇಶ್ವರ ಪಪೂ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೇಬಿಸ್ ರೋಗಕ್ಕೆ ತುತ್ತಾಗುವವರ ಪೈಕಿ ಸಾವಿಗೀಡಾಗುವವರ ಸಂಖ್ಯೆ ಗಮನಿಸಿದರೆ ಏಷ್ಯಾ ಖಂಡದಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಶೇ.90 ನಾಯಿಗಳಿಂದಲೇ ಹರಡುವ ಕಾಯಿಲೆ ಇದಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. 2030ರೊಳಗೆ ರೇಬಿಸ್ ಮುಕ್ತ ಭಾರತವನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ರೇಬಿಸ್ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮುಂಜಾಗ್ರತೆ ವಹಿಸಬೇಕಿದೆ ಎಂದರು.
ಕಾಲೇಜು ಸಭಾಭವನದಲ್ಲಿ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ರೇಬಿಸ್ ಕುರಿತು ಮಾಹಿತಿ ನೀಡಲಾಯಿತು. ಪಶು ಪಾಲನಾ ಇಲಾಖೆ ಸಿಬ್ಬಂದಿ ಸಂಗಪ್ಪ, ಪ್ರವೀಣ, ಸಿದ್ದು, ಸೌಮ್ಯಾ, ವೀರೇಶ, ಕರೀಂಸಾಬ್ ಇತರರಿದ್ದರು. ಶ್ವಾನಗಳಿಗೆ ರೇಬಿಸ್ ಲಸಿಕೆ ಹಾಕಲಾಯಿತು.