

ಗೋಕಾಕ/ಬೆಳಗಾವಿ: ಗೋಕಾಕ ಪಟ್ಟಣದ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಿಂದ ಶನಿವಾರ ಸಂಜೆ ಪರಾರಿಯಾಗಿದ್ದ 30 ವರ್ಷದ ಮಹಿಳೆಯನ್ನು ಪೊಲೀಸರು ತಡರಾತ್ರಿ ಬಂಧಿಸಿದ್ದಲ್ಲದೆ, ಆಕೆಯ ಪತಿ ಹಾಗೂ ಮಗುವನ್ನೂ ಮತ್ತೆ ಕ್ವಾರಂಟೈನ್ ಮಾಡಿದ್ದಾರೆ.
ಪೆರೋಲ್ ಮೇಲೆ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದ ಪತಿಯೊಂದಿಗೆ ಮೊಬೈಲ್ ಮೂಲಕ ಮಾತನಾಡಿ ಮನೆಗೆ ಕರೆದು ಕೊಂಡು ಹೋಗು ವಂತೆ ತಿಳಿಸಿದ್ದಾಳೆ. ಬಳಿಕ ಕೇಂದ್ರದಿಂದ ಗೋಕಾಕ ಬಸ್ ನಿಲ್ದಾಣಕ್ಕೆ ಆಗಮಿಸಿ ಗಂಡನೊಂದಿಗೆ ಪರಾರಿ ಆಗಿದ್ದಳು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದ್ದರು. ಮಹಿಳೆ ಆಕೆಯ ಪತಿ ಹಾಗೂ 3 ವರ್ಷದ ಮಗಳು ಬೆಲ್ಲದಬಾಗೇವಾಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನೂ ಈಗ ಕ್ವಾರಂಟೈನ್ ಮಾಡಲಾಗಿದೆ.
ಮಹಾರಾಷ್ಟ್ರದಿಂದ ಆಗಮಿಸಿದ್ದ ಕಾರಣಕ್ಕೆ ಮಹಿಳೆಯನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ವೈದ್ಯಕೀಯ ಪರೀಕ್ಷೆ ಆಗಿರಲಿಲ್ಲ. ಹೀಗಾಗಿ ಎಲ್ಲರ ಕಣ್ಣುತಪ್ಪಿಸಿ ಕ್ವಾರಂಟೈನ್ ಕೇಂದ್ರದಿಂದ ಮಹಿಳೆ ನಾಪತ್ತೆಯಾಗಿದ್ದರಿಂದ ಆತಂಕ ಹೆಚ್ಚಾಗಿತ್ತು.