

ಮೂಡಲಗಿ: ಇತಿಹಾಸ ಪ್ರಸಿದ್ಧ ಅಂಕಲಗಿ ಅಡವಿ ಸಿದ್ಧೇಶ್ವರ ಸ್ವಾಮೀಜಿಗಳ ಮಠಕ್ಕೆ ಭವ್ಯ ಪರಂಪರೆಯಿದೆ. ಶ್ರೀಮಠದ ಅಭಿವೃದ್ಧಿಗೆ ಎಲ್ಲರೂ ಪಣತೊಡೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಶಿವಾಪುರ (ಹ) ಗ್ರಾಮದಲ್ಲಿ ಈಚೆಗೆ ಅಂಬಲಿ ಒಡೆಯ ಅಡವಿ ಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಸಮಾಜದ ಸುಧಾರಣೆಯಲ್ಲಿ ಮಠ-ಮಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಾಜಕ್ಕೆ ಶಾಂತಿ ಸಂದೇಶ ಸಾರಲು ಮಠಗಳು ಬೇಕು. ಪವಾಡ ಪುರುಷ ಅಡವಿ ಸಿದ್ಧೇಶ್ವರ ಸ್ವಾಮೀಜಿ ಬದುಕು ಆದರ್ಶಪ್ರಾಯ ಎಂದರು.
140 ಕೋಟಿ ಜನಸಂಖ್ಯೆಯುಳ್ಳ ನಮ್ಮ ದೇಶದಲ್ಲಿ ನಾನಾ ಜಾತಿ-ಧರ್ಮಗಳಿದ್ದರೂ ಎಲ್ಲರೂ ಅಣ್ಣ- ತಮ್ಮಂದಿರಂತೆ ಬದುಕುತ್ತಿದ್ದೇವೆ. ಸಾಮರಸ್ಯ ಬದುಕು ನಮ್ಮದಾಗಿದೆ ಎಂದರು. ಮಠದ ಪೀಠಾಧಿಪತಿ ಅಡವಿ ಸಿದ್ಧರಾಮ ಸ್ವಾಮೀಜಿ, ಹೊಸೂರಿನ ಗಂಗಾಧರ ಸ್ವಾಮೀಜಿ, ಬೈಲಹೊಂಗಲ ಮೂರು ಸಾವಿರ ಮಠದ ನೀಲಕಂಠ ಸ್ವಾಮೀಜಿ, ದೇವರ ಶೀಗಿಹಳ್ಳಿಯ ವೀರೇಶ್ವರ ಸ್ವಾಮೀಜಿ, ಕಂಕಣವಾಡಿಯ ಮಾರುತಿ ಶರಣರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಹಣಮಂತ ತೇರದಾಳ, ಸಂತೋಷ ಸೋನವಾಲಕರ, ಶಿವಬಸು ಜುಂಜರವಾಡ, ಕೆಂಪಣ್ಣ ಮುಧೋಳ, ಲಕ್ಷ್ಮಣ ಕತ್ತಿ, ಸತೀಶ ಜುಂಜರವಾಡ, ಮಲ್ಲಪ್ಪ ಜುಂಜರವಾಡ, ಮಹಾಂತೇಶ ಕುಡಚಿ ಇತರರಿದ್ದರು.