ಮಠಗಳಿಂದ ಸಮಾಜದಲ್ಲಿ ಸಂಸ್ಕಾರ ಬಿತ್ತನೆ

dvd halumatha
ದೇವದುರ್ಗ ತಾಲೂಕು ತಿಂಥಣಿ ಬ್ರಿಡ್ಜ್‌ನಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ, ಸರ್ವ ಸಿದ್ಧರ ಸ್ಮರಣೋತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಉದ್ಘಾಟಿಸಿದರು. ಸಿದ್ಧರಾಮಾನಂದ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ, ಮಕಣಾಪುರದ ಸೋಮೇಶ್ವರ ಸ್ವಾಮೀಜಿ, ಅಗತೀರ್ಥದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ ಇತರರಿದ್ದರು.
Published on

ದೇವದುರ್ಗ: ನಮ್ಮ ಸಂಸ್ಕೃತಿ, ಸಂಪ್ರದಾಯ ಆಧುನಿಕ ಹೊಡೆತಕ್ಕೆ ಸಿಲುಕಿ ನಲುಗಿದ್ದು, ದಾರಿ ತಪ್ಪುತ್ತಿದೆ. ಇಂಥ ಸಂದರ್ಭದಲ್ಲಿ ಮಠಮಾನ್ಯಗಳು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಬೆಳಕು ತೋರಿ ಸಮಾಜದಲ್ಲಿ ಸಂಸ್ಕಾರ ಬಿತ್ತುತ್ತಿವೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕಗುರುಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವದ ಕೊನೇ ದಿನವಾದ ಮಂಗಳವಾರ ಆಯೋಜಿಸಿದ್ದ ಶ್ರೀ ಸಿದ್ಧರಾಮೇಶ್ವರ ಜಯಂತಿ, ಸರ್ವಸಿದ್ಧರ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಕ್ತರಲ್ಲಿ ಸಂಸ್ಕಾರ, ಮಾನವೀಯ ಮೌಲ್ಯ, ಅಧ್ಯಾತ್ಮ ಬೋಧನೆ ಮಾಡುವಲ್ಲಿ ಮಠಗಳ ಪಾತ್ರ ದೊಡ್ಡದಿದೆ. ಹಲವು ಮಠಗಳು ಅನ್ನ, ಅಕ್ಷರ, ಆಶ್ರಯದ ಜತೆಗೆ ಸಾಮೂಹಿಕ ವಿವಾಹ, ಧರ್ಮ ಜಾಗೃತಿ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿವೆ ಎಂದರು.

ತಿಂಥಣಿ ಕಾಗಿನೆಲೆ ಕನಕಗುರುಪೀಠ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಮಾಡುವುದರ ಜತೆಗೆ ಈ ಭಾಗದ ಹೆಳವರು, ಪೂಜಾರಿಗಳು, ಗೊಲ್ಲರು, ಸುಡುಗಾಡ ಸಿದ್ಧರು ಸೇರಿ ನಮ್ಮ ಸಂಪ್ರದಾಯ ಬಿಂಬಿಸುವ ಕಲೆ, ಬುಡಕಟ್ಟು, ಆದಿವಾಸಿಗಳ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ. ಮಠಗಳಿಗೆ ಸರ್ಕಾರ ಹಾಗೂ ಭಕ್ತರು ಸಹಕಾರ ನೀಡಬೇಕಾದ ಅಗತ್ಯವಿದೆ ಎಂದರು.

ಪೀಠಾಧಿಪತಿ ಸಿದ್ಧರಾಮಾನಂದ ಸ್ವಾಮೀಜಿ ಮಾತನಾಡಿ, ಹಾಲುಮತ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇದು ಒಂದು ಜಾತಿಗೆ ಸೀಮಿತವಾಗಿಲ್ಲ. ಯುವಕರು ಆಧುನಿಕ ಜಗತ್ತಿಗೆ ಮಾರುಹೋಗಿ ನಮ್ಮತನವನ್ನು ಬಿಡಬಾರದು. ಮೊಬೈಲ್, ಟಿವಿ, ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ದಾಸರಾಗದೆ ಕುಟುಂಬ, ಸಮಾಜ ಮುನ್ನಡೆಸುವ ಮಾರ್ಗದರ್ಶಕರಾಗಬೇಕು ಎಂದು ತಿಳಿಸಿದರು.

ಹೊಸದುರ್ಗದ ಶ್ರೀ ಈಶ್ವರಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಕಣಾಪುರದ ಸೋಮೇಶ್ವರ ಸ್ವಾಮೀಜಿ, ಅಗತೀರ್ಥದ ರೇವಣ ಸಿದ್ಧೇಶ್ವರ ಶಾಂತಮಯ ಸ್ವಾಮೀಜಿ, ಅಮೃತರಾವ್ ಚಿಮ್ಮಕೋಡೆ, ಕೆ.ಕರಿಯಪ್ಪ, ಚಂದ್ರಶೇಖರ ಗಂಗಣ್ಣ, ಬಿ.ಡಿ.ಗಂಗರಾಜ, ಡಾ.ಭರತ್‌ಕುಮಾರ, ಡಾ.ಕಿರಣ್‌ಕುಮಾರ ಎಸ್.ಕುಳಗೇರಿ ಇತರರಿದ್ದರು.

ಟಗರಿನ ಕಾಳಗ: ಹಾಲುಮತ ಸಂಸ್ಕೃತಿ ಉತ್ಸವ ನಿಮಿತ್ತ ಟಗರಿನ ಕಾಳಗ ಹಾಗೂ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ತಳಿಯ ಟಗರುಗಳ ಗುದ್ದಾಟ ಹಾಗೂ ರಾಯಚೂರು, ಯಾದಗಿರಿ, ಸುರಪುರ, ಶಹಾಪುರ ಸೇರಿ ವಿವಿಧ ಭಾಗದ ಜೋಡೆತ್ತುಗಳು ಭಾಗವಹಿಸಿ ಭಾರದ ಕಲ್ಲು ಎಳೆದು ಗಮನ ಸೆಳೆದವು. ವಿಜೇತರಿಗೆ ಬೆಳ್ಳಿ ಕಡಗ, ನಗದು ಬಹುಮಾನ ನೀಡಲಾಯಿತು. ಜನರು ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸ್ಪರ್ಧೆಗೆ ಪ್ರೋತ್ಸಾಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net