ಕಿಡಿಗೇಡಿಗಳಿಂದ ಶಾಲೆ ಪರಿಸರ ಹಾಳು

21 GURUGUNTA 01
ಗೌಡೂರು ಸರ್ಕಾರಿ ಶಾಲೆ ಕೊಠಡಿಯೊಂದರಲ್ಲಿ ಬಿದ್ದಿರುವ ಗುಟ್ಖಾ ಚೀಟಿ ಮತ್ತು ಇಸ್ಪೀಟ್‌ಎಲೆಗಳು.
Published on

ಗುರುಗುಂಟಾ: ಕೆಲ ಕಿಡಿಗೇಡಿಗಳ ಹಾವಳಿಯಿಂದ ಸಮೀಪದ ಗೌಡೂರು ಸರ್ಕಾರಿ ಶಾಲೆ ಅಕ್ರಮ ಚಟುವಟಿಕೆಯ ಅಡ್ಡೆಯಾಗಿ ಪರಿಣಮಿಸಿದೆ. 1ರಿಂದ 7ನೇ ತರಗತಿಯವರೆಗಿನ ಶಾಲೆಯಲ್ಲಿ 350 ವಿದ್ಯಾರ್ಥಿಗಳಿದ್ದು, 4 ಜನ ಶಿಕ್ಷಕರಿದ್ದಾರೆ. ಬೇಸಿಗೆ ರಜೆ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಿಸಿ ಬೀಗ ಹಾಕಲಾಗಿತ್ತು. ಈ ವೇಳೆಯನ್ನು ಬಂಡವಾಳವಾಗಿಸಿಕೊಂಡ ಪಡ್ಡೆ ಹುಡುಗರು ಅಕ್ರಮ ಕೂಟ ರಚಿಸಿಕೊಂಡು ಶಾಲೆಯ ಬಾಗಿಲು ಮುರಿದು ಇಸ್ಪೀಟ್,ಮದ್ಯ, ಜೂಜಾಟ

ಸೇರಿದಂತೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿ ಶಾಲೆಯ ಪರಿಸರ ಅಂದಗೆಡವಿದ್ದಾರೆ.

ಶಾಲೆಯ ಕೊಠಡಿ ಒಳಗೆ ತಿಂದು ಬಿಸಾಡಿದ ತಿಂಡಿ ಪದಾರ್ಥಗಳ ಆಹಾರ ಪೊಟ್ಟಣ, ಇಸ್ಪೀಟ್ ಎಲೆ, ಸೇದಿ ಎಸೆದ ಬೀಡಿ-ಸಿಗರೇಟ್, ಗುಟ್ಕಾ ಚೀಟಿ ತಿಂದು ಉಗುಳಿದ್ದಾರೆ. ರಾತ್ರಿಯಾದರೆ ಸಾಕು ಎತ್ತರವಿರುವ ಶಾಲಾ ಆವರಣ ಗೋಡೆಯನ್ನು ಮರೆಯಾಗಿಸಿಕೊಂಡು ಆವರಣವನ್ನು ಕೃತಕ ಶೌಚಗೃಹವನ್ನಾಗಿ ಪರಿವರ್ತಿಸಿಕೊಂಡು ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಗ್ರಾಮಸ್ಥರು ಕಿಡಿಗೇಡಿಗಳ ಕೃತ್ಯ ಖಂಡಿಸಿದ್ದು , ಈ ಅವ್ಯವಸ್ಥೆ ಸರಿಪಡಿಸಲು ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಶಿಕ್ಷಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಅಲ್ಲದೇ ಸಂಶಯಾಸ್ಪದ ಯುವಕರನ್ನು ಪತ್ತೆ ಹಚ್ಚಬೇಕೆಂದು ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಇಂತಹ ಕೃತ್ಯಗಳು ಬೇಸರ ತರಿಸುತ್ತಿವೆ. ಶಾಲೆ ಆವರಣದಲ್ಲಿ ಇಂತಹ ಕೃತ್ಯ ನಡೆದಾಗ ಅನೇಕ ಬಾರಿ ತ್ಯಾಜ್ಯಗಳನ್ನು ಸುಟ್ಟು ಸ್ವಚ್ಛಗೊಳಿಸಿದ್ದೇವೆ. ಈ ಬಾರಿ ಬೇಸಿಗೆ ರಜೆಯಲ್ಲಿ ಶಾಲೆ ಕೊಠಡಿ ಬೀಗ ಮುರಿದು ಈ ಕೃತ್ಯ ನಡೆಸುತ್ತಿದ್ದು ಶಾಲೆಗೆ ಭದ್ರತೆಯ ಅವಶ್ಯಕತೆ ಇದೆ.

ಫರೀದ್

ಸಹಿಪ್ರಾಶಾಲೆ ಶಿಕ್ಷಕ, ಗೌಡೂರು

ಸಾರ್ವಜನಿಕರು ಪ್ರಜ್ಞಾವಂತರಾಗಬೇಕು. ಶಾಲೆ ಎಂದರೆ ನಮ್ಮನೆ ಹಾಗೂ ದೇಗುಲವೆಂಬ ಭಾವನೆಯೊಂದಿಗೆ ಶಾಲೆ ಮತ್ತು ಆವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಪುನರಾವರ್ತನೆಯಾಗದಿರಲಿ.

ರಾಜಾ ಸೇತುರಾಮ ನಾಯಕ

ತಾಪಂ ಮಾಜಿ ಸದಸ್ಯ ಗೌಡೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net