

ಹುಕ್ಕೇರಿ: ತಾಲೂಕಿನ ಸಂಕೇಶ್ವರ ಭಾಗದ ಹರಗಾಪುರ, ಮತ್ತಿವಾಡ, ನಾಂಗನೂರ, ಹಿಟ್ನಿ ಮತ್ತು ಭೈರಾಪುರ ಕೆರೆಗಳಿಗೆ 70.4 ಎಂಸಿಎಫ್‌ಟಿ ನೀರು ಸಂಗ್ರಹಿಸುವ ಸಾಮರ್ಥ್ಯ ಇದ್ದು, ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಸಂಕೇಶ್ವರ ಭಾಗದ ಐದು ಕೆರೆಗಳಿಗೆ ಗುರುವಾರ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಿರಣ್ಯಕೇಶಿ ನದಿಯಿಂದ ಸ್ವಲ್ಪ ದೂರದಲ್ಲಿರುವ ಈ ಗ್ರಾಮಗಳಿಗೆ ನೀರಾವರಿ ಸೌಕರ್ಯ ಇಲ್ಲದಾಗಿ ಮಳೆಯಾಶ್ರಿತ ಬೆಳೆ ಬೆಳೆಯುತ್ತಿದ್ದರು. ಈ ಕೆರೆಗಳ ನಿರ್ಮಾಣದಿಂದ ಕಬ್ಬು ಮತ್ತು ತರಕಾರಿ ಬೆಳೆಯುತ್ತಿದ್ದಾರೆ ಎಂದರು. ಕೆರೆ ತುಂಬಿಸುವ ಪೈಪ್‌ಲೈನ್‌ಗಳನ್ನು ಕೆಲ ರೈತರು ಹಾಳು ಮಾಡಿ ಕೇವಲ ತಮ್ಮ ಕೆರೆಗಳಿಗೆ ಮಾತ್ರ ನೀರು ಇರುವಂತೆ ಮಾಡುತ್ತಿದ್ದಾರೆ. ನಾವು ಬದುಕಬೇಕು, ಮತ್ತೊಬ್ಬರನ್ನು ಬೆಳೆಸಬೇಕು ಎಂಬ ಮನೋಭಾವ ರೈತರಲ್ಲಿ ಬರಬೇಕು. ಇಂತಹ ಕೃತ್ಯ ಎಸಗಿದ ರೈತರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಮತ್ತು ಅಶೋಕ ಹಿರೇಕೊಡಿ ಮಾತನಾಡಿ, ಮಾಜಿ ಸಚಿವ ದಿ.ಉಮೇಶ ಕತ್ತಿ ಅವರು ನಮ್ಮ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆರೆಗಳನ್ನು ನಿರ್ಮಿಸಿ ಅವುಗಳಿಗೆ ನೀರು ತುಂಬಿಸಲು ಮಾಡಿರುವ ಕಾರ್ಯ ಇದೀಗ ಫಲ ನೀಡುತ್ತಿದೆ ಎಂದು ಸ್ಮರಿಸಿದರು.
ಗಜಾನನ ಕೊಳ್ಳಿ, ರೋಹನ ನೇಸರಿ, ನಂದು ಮುಡಶಿ, ಪ್ರಶಾಂತ ಪಾಟೀಲ, ವಿಜಯ ಶೇರೇಕರ, ಪ್ರಕಾಶ ಹಾಲಟ್ಟಿ, ಎನ್.ಬಿ.ಪಾಟೀಲ, ಅಣ್ಣಪ್ಪ ಪಾಟೀಲ, ಚಂದರ ಪಾಟೀಲ, ಕಿರಣ ಪಾಟೀಲ, ನಾನಾ ಪಾಟೀಲ, ಮಹಾದೇವ ಗೋಟೂರೆ, ದೇವಾನಂದ ಚವ್ಹಾಣ, ಹನುಮಂತ ನಾಯಿಕ, ಬಸವರಾಜ ಗಂಗನ್ನವರ, ಚಿಕ್ಕ ನೀರಾವರಿ ಇಲಾಖೆ ಎಇಇ ಸಂಜಯ ಮಾಳಗಿ ಇತರರು ಇದ್ದರು.