

ಬೆಳಗಾವಿ: ಗ್ರಾಮೀಣ ಭಾಗದಲ್ಲಿ ನಶಿಸಿ ಹೋಗುತ್ತಿರುವ ಕ್ರೀಡೆಗಳನ್ನು ಉಳಿಸಲು ಸಾಮಾಜಿಕ ಸಂಸ್ಥೆಗಳ ಜತೆಗೆ ಸಹಕಾರಿ ಸಂಸ್ಥೆಗಳು ಕೂಡ ಆದ್ಯತೆ ನೀಡಿದರೆ ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಸಹಕಾರಿಯಾಗುತ್ತದೆ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಡಾ.ಪ್ರಭಾಕರ ಕೋರೆ 77ನೇ ಜನ್ಮದಿನ ನಿಮಿತ್ತ ಡಾ.ಪ್ರಭಾಕರ ಕೋರೆ ಹುಟ್ಟುಹಬ್ಬ ಆಚರಣೆ ಸಮಿತಿ, ಶಿವಶಕ್ತಿ ಶುಗರ್ಸ್, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಹರ್ಮ್ಸ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್, ಕೆಎಲ್ಇ ಸಂಸ್ಥೆಯ ಅಂಗಸಂಸ್ಥೆಗಳ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ಸೇರಿ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾದ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಸಮಿತಿಯಿಂದ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಕಾರ್ಯಾಲಯದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿ. ಆ ನಿಟ್ಟಿನಲ್ಲಿ ಅಂಕಲಿಯಲ್ಲಿ ಹಲವು ಸ್ಪರ್ಧೆ ಆಯೋಜಿಸಿ ಸ್ಪರ್ಧಾಳುಗಳಿಗೆ ವೇದಿಕೆ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ಕೆಎಲ್‌ಇ ಸಂಸ್ಥೆ ವತಿಯಿಂದ ಕ್ರೀಡೆ ಹಾಗೂ ಕ್ರೀಡಾಪಟುಗಳ ಪೋಷಣೆ ಮುಂದುವರಿಯಲಿದೆ ಎಂದರು. ಡಾ.ಪ್ರಭಾಕರ ಕೋರೆ ಅವರಿಗೆ ಹುಟ್ಟುಹಬ್ಬದ ಸಮಿತಿಯಿಂದ ಬೆಳ್ಳಿ ಗದೆ ನೀಡುವ ಮೂಲಕ ಅಭಿನಂದಿಸಲಾಯಿತು.
ಡಾ.ಪ್ರಭಾಕರ ಕೋರೆ ಹುಟ್ಟುಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಬಿ.ಆರ್.ಪಾಟೀಲ, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ನಿರ್ದೇಶಕರಾದ ಅಣ್ಣಾಸಾಹೇಬ ಪಾಟೀಲ, ಭರತೇಶ ಬನವಣೆ ಹಾಗೂ ಕುಸ್ತಿ ಪಂದ್ಯಾವಳಿ ಸಂಘಟಕ ಸಂಜಯ ಕುಡಚೆ, ಪೈಲ್ವಾನ್‌ಗಳಾದ ರತನಕುಮಾರ ಮಠಪತಿ, ಸಚಿನ ಪೂಜಾರಿ, ಅಪ್ಪಾಸಾಹೇಬ ಅಂಬಿ, ತಾತ್ಯಾಸಾಹೇಬ ಅಂಬಿ, ಅಜಿತ ದಿಗ್ಗೇವಾಡಿ, ಮಹಾವೀರ ಜಕನೂರ, ಡಾ.ಪ್ರಭಾಕರ ಕೋರೆ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ ಇತರರಿದ್ದರು.
ಡಾ.ಪ್ರಭಾಕರ ಕೋರೆ ಹುಟ್ಟೂರಾದ ಅಂಕಲಿ ಗ್ರಾಮದಲ್ಲಿ ಜು.31ರಂದು ಕೋರೆ ಅವರ 77ನೆಯ ಜನ್ಮದಿನ ನಿಮಿತ್ತ ಹುಟ್ಟುಹಬ್ಬ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ಪಂಜಾಬನ ಭೂಪೇಂದ್ರ ಅಜನಾಳ ಅವರನ್ನು ಇರಾನ್ ದೇಶದ ಮಿರ್ಜಾ ಅವರು ಮಣಿಸಿ ಡಾ.ಪ್ರಭಾಕರ ಕೋರೆ ಕೇಸರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಅದ್ದೂರಿಯಾಗಿ ಆಯೋಜನೆಗೊಂಡಿದ್ದ ಕುಸ್ತಿ ಪಂದ್ಯಾವಳಿ ತಡರಾತ್ರಿವರೆಗೂ ಜರುಗುವ ಮೂಲಕ ಗಮನ ಸೆಳೆದಿತ್ತು. ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದರು. ವಿವಿಧ ರಾಷ್ಟ್ರಗಳ ಮೂಲೆಮೂಲೆಗಳಿಂದ ಆಗಮಿಸಿದ್ದ ಖ್ಯಾತ ಕುಸ್ತಿ ಪಟುಗಳು ಪಟ್ಟು ಪ್ರದರ್ಶಿಸಿದ್ದರು.