ಕೈಗಾರಿಕೀಕರಣ, ನಗರೀಕರಣ, ಆಧುನೀಕರಣದಿಂದ ಪರಿಸರ ನಾಶ

HEALTH NEW
ಯಲಬುರ್ಗಾ ತಾಲೂಕಿನ ಹೊಸಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಉದ್ಘಾಟಿಸಿದರು. ಕುಲಸಚಿವ ಕೆ.ವಿ.ಪ್ರಸಾದ, ಗ್ರಾಪಂ ಅಧ್ಯಕ್ಷೆ ನಗಿನಾಬೇಗಂ, ಪ್ರಾಚಾರ್ಯ ವಿ.ಬಿ.ಹನುಮಶೆಟ್ಟಿ, ಪಿಎಸ್‌ಐ ಯು.ಡಾಕೇಶ ಇದ್ದರು.
Published on

ಯಲಬುರ್ಗಾ: ಗಿಡಮರಗಳನ್ನು ರಕ್ಷಿಸದೇ ಹೋದರೆ ಯುವ ಪೀಳಿಗೆ ಬಹುದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಹೇಳಿದರು.

ತಾಲೂಕಿನ ಹೊಸಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸ್ನಾತಕೋತ್ತರ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಗ್ರಾಪಂ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ (ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಆವರಣ) ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಪ್ರಕೃತಿ ಮೇಲೆ ದಾಳಿ

ಕೈಗಾರಿಕೀಕರಣ, ನಗರೀಕರಣ, ಆಧುನೀಕರಣದಿಂದ ಪರಿಸರ ನಾಶವಾಗುತ್ತಿದೆ. ಪ್ರಕೃತಿ ಮೇಲೆ ದಾಳಿ ನಡೆಸಲಾಗುತ್ತಿದ್ದು, ಕಾಂಕ್ರಿಟ್ ಕಾಡು ನಿರ್ಮಿಸಲಾಗುತ್ತಿದೆ. ಪ್ರಕೃತಿ, ನದಿ ತೊರೆಗಳು, ಪಕ್ಷಿಸಂಕುಲದ ಬಗ್ಗೆ ಹಿರಿಯರು ಹೇಳುತ್ತಿದ್ದ ನೀತಿಕತೆಗಳ ಕಲ್ಪನಾಶಕ್ತಿ ಮರೆಯಾಗುತ್ತಿದೆ. ವನಮಹೋತ್ಸವ ಕಾರ್ಯಕ್ರಮಕ್ಕೆ ಸೀಮಿತವಾಗದೆ ಪರಿಸರ ಉಳಿಸುವ ಮೂಲಕ ಮೂಲಕ ರಾಷ್ಟ್ರ ರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ ಎಂದರು.

ಕೆವಿವಿ ಕುಲಸಚಿವ ಕೆ.ವಿ.ಪ್ರಸಾದ, ಪ್ರಾಚಾರ್ಯ ವಿ.ಬಿ.ಹನುಮಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಪೋಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಮಕ್ಕಳಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.

ಪಿಎಸ್‌ಐ ಯು.ಡಾಕೇಶ, ಪ್ರಾಧ್ಯಾಪಕ ಡಾ.ಸಿ.ಐ.ಛಲವಾದಿ, ಸಹಾಯಕ ಪ್ರಾಧ್ಯಾಪಕ ಬಸವರಾಜ ಈಳಿಗನೂರ ಮಾತನಾಡಿದರು.
ಜಾಗೃತಿ: ಕಾರ್ಯಕ್ರಮಕ್ಕೂ ಮುಂಚೆ ಹೊಸಳ್ಳಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗ್ರಾಮದಿಂದ ವಸತಿ ಶಾಲೆವರೆಗೂ ಪರಿಸರ ಸಂರಕ್ಷಣೆ ಕುರಿತು ಘೋಷಣೆ ಕೂಗುತ್ತಾ, ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.

ಗ್ರಾಪಂ ಅಧ್ಯಕ್ಷೆ ನಗಿನಾಬೇಗಂ ನೂರ್‌ಬಾಷಾ, ಸದಸ್ಯರಾದ ಮಂಜುನಾಥ ದೊಡ್ಮನಿ, ನೀಲನಗೌಡ ತೊಂಡಿಹಾಳ, ಉಮಾದೇವಿ ಶಿರೂರು, ಪ್ರಾಧ್ಯಾಪಕರಾದ ಪ್ರಕಾಶ ಯಳವಟ್ಟಿ, ಸಾದು ಸೂರ್ಯಕಾಂತ, ಅಶ್ವಿನಕುಮಾರ, ಅರಣ್ಯಾಧಿಕಾರಿ ಅಂದಪ್ಪ ಕುರಿ, ಮುಖ್ಯಶಿಕ್ಷಕ ಅಖಂಡಪ್ಪ ಮಾಯಾಚಾರಿ, ವಸತಿ ಶಾಲೆ ಶಿಕ್ಷಕರು, ಸ್ನಾತಕೋತ್ತರ ಕೇಂದ್ರ, ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಭಾರತದ ನಾರಿಯರ ಸಬಲೀಕರಣವಾದರೆ ಮಾತ್ರ ರಾಷ್ಟ್ರ ಅಭಿವೃದ್ಧಿಯಾಗುತ್ತದೆ. ಮಹಿಳೆ ಕಾಲಾಂತರದಲ್ಲಿ ಶೋಷಣೆ, ನೋವು ಅನುಭವಿಸಿದ್ದಾಳೆ. ಎಲ್ಲರೂ ಅಂಬೇಡ್ಕರ್ ಬಗ್ಗೆ ಚಿಂತನೆ ನಡೆಸಬೇಕಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಉನ್ನತ ಗುರಿ ಮುಟ್ಟುವ ಮೂಲಕ ಪಾಲಕರ ಕನಸು ನನಸು ಮಾಡಬೇಕು.


ಪ್ರೊ.ಬಿ.ಕೆ.ರವಿ

ಕುಲಪತಿ, ಕೊಪ್ಪಳ ವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net