

ಬೆಳಗಾವಿ: ಬೇರು ಗಟ್ಟಿಯಾಗಿದ್ದರೆ ಮಾತ್ರ ಗಿಡ ಮರವಾಗಿಬೆಳೆಯಲು ಸಾಧ್ಯ. ಅದರಂತೆ ಕೆಳಸ್ತರದಲ್ಲಿ ದುಡಿಯುವ ನೌಕರರು ಪ್ರಾಮಾಣಿಕ ಸೇವೆ ಸಲ್ಲಿಸುವುದರೊಂದಿಗೆ ಉದ್ಯೋಗದಾತರರಿಗೆ ನಿಷ್ಠೆಯಿಂದ ಇದ್ದರೆ ಪ್ರತಿ ಸಂಸ್ಥೆ ಯಶಸ್ಸು ಸಾಧಿಸುತ್ತದೆ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದ್ದಾರೆ.
ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 58ನೇ ಜನ್ಮದಿನದ ನಿಮಿತ್ತ ಇಲ್ಲಿನ ಮಹಾಂತೇಶ ನಗರದಲ್ಲಿ ಗುರುವಾರ ಯಕ್ಸಾಂಬಾದ ಶ್ರೀಜ್ಯೋತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 49ನೇ ಶಾಖೆ ಉದ್ಘಾಟಿಸಿ ಮಾತನಾಡಿದರು. ಶಾಸಕ ಅನಿಲ ಬೆನಕೆ ಮಾತನಾಡಿ, ಜೊಲ್ಲೆ ಸಹಕಾರಿಯು ಬಡವರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿರುವುದು ಮಾದರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ ಜಾಗ ನೀಡಿದ ಹಾಗೂ ಶಾಖೆಯಲ್ಲಿ ಈಗಾಗಲೇ ಠೇವಣಿ ಇಟ್ಟ ಗ್ರಾಹಕರನ್ನು ಗೌರವಿಸಲಾಯಿತು.
ಮಾಜಿ ಶಾಸಕ ಸಂಜಯ ಪಾಟೀಲ, ಶಶಿಕಾಂತ ಪಾಟೀಲ, ಮಾರುತಿ ಅಷ್ಟಗಿ, ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬಸವ ಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಸಹಕಾರಿ ಅಧ್ಯಕ್ಷ ಚಂದ್ರಕಾಂತ ಖೋತ, ಉಪಾಧ್ಯಕ್ಷ ಬಾಬುರಾವ ಮಾಳಿ, ನಿರ್ದೇಶಕ ಕಲ್ಲಪ್ಪಣ್ಣ ಜಾಧವ, ಉಪಪ್ರಧಾನ ವ್ಯವಸ್ಥಾಪಕ ಸಂತೋಷ ಪಾಟೀಲ, ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ ಫರಾಳೆ ಸೇರಿದಂತೆ ಸ್ಥಳೀಯರು ಇದ್ದರು. ಬೀರೇಶ್ವರ ಸಂಸ್ಥೆ ಅಧ್ಯಕ್ಷ ಜಯಾನಂದ ಜಾಧವ, ಪ್ರಧಾನ ವ್ಯವಸ್ಥಾಪಕ ವಿಜಯ ಖಡಕಬಾವಿ, ಮಿಥುನ ಅಂಕಲಿ ನಿರೂಪಿಸಿದರು.