ಹೋಮದಿಂದ ಲೋಕದ ಸಂಕಷ್ಟ ಪರಿಹಾರ

6
ಶಿರಸಂಗಿಯಲ್ಲಿ ಶ್ರೀ ಶತಚಂಡಿಕಾ ಮಹಾಯಾಗ ಜರುಗಿತು.
Published on

ಶಿರಸಂಗಿ: ಲೋಕಕಲ್ಯಾಣಾರ್ಥವಾಗಿ ನಡೆದ ಶ್ರೀ ಶತ ಚಂಡಿಕಾ ಮಹಾಯಾಗ ಇಡೀ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಶಕ್ತಿ ನೀಡಲಿದ್ದು, ಲೋಕದ ಜನರ ಸಂಕಷ್ಟಗಳನ್ನು ಪರಿಹರಿಸಲಿದೆ ಎಂದು ಯಾದಗಿರಿ ಏಕದಂಡಿಗಿ ಸರಸ್ವತಿ ಪೀಠದ ಶ್ರೀನಿವಾಸ ಸ್ವಾಮೀಜಿ ಹೇಳಿದರು.

ವಿಶ್ವಕರ್ಮ ಪೂಜಾ ಮಹೋತ್ಸವ ಅಂಗವಾಗಿ ವಿಶ್ವಕರ್ಮರ ಶಕ್ತಿಪೀಠ ಶಿರಸಂಗಿಯ ಶ್ರೀ ಕಾಳಿಕಾದೇವಿ ಸನ್ನಿಧಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಶತಚಂಡಿಕಾ ಮಹಾಯಾಗ, ಧಾರ್ಮಿಕ ಸಭೆ ಹಾಗೂ ಭೂದಾನಿಗಳಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಯಜ್ಞಯಾಗಾದಿಗಳಲ್ಲಿ ಸಾಧನೆ ಮಾಡಿದ ಸಾಕಷ್ಟು ಶ್ರೇಷ್ಠ ಪೌರೋಹಿತ್ಯರು ವಿಶ್ವಕರ್ಮರಲ್ಲಿದ್ದಾರೆ. ಇಂದಿನ ಮಹಾಯಾಗದ ದೇವಲೋಕವನೇ ಧರೆಗೆ ಇಳಿಸಿದಂತಿತ್ತು. ಪ್ರಾಕತಿಕವಾಗಿ ಸಿಗುವ ವಸ್ತುಗಳನ್ನು ಸಾಮಾಜಿಕವಾಗಿ ಬದಲಾಯಿಸಿ ಜನರಿಗೆ ನೀಡುವ ಏಕೈಕ ಸಮುದಾಯ ವಿಶ್ವಕರ್ಮ ಎಂದರು.

ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮರ ಶಕ್ತಿ ಅಗಾಧವಾಗಿದ್ದು, ಎಲ್ಲ ಸಮುದಾಯದ ಹಿತ ಬಯಸುವವರು ವಿಶ್ವಕರ್ಮರು ಎಂದರು. ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಶಿರಸಂಗಿಯ ತ್ಯಾಗವೀರ ಲಿಂಗರಾಜ ಸ್ಮಾರಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೀರಯ್ಯ ಅದಶ್ಯಪ್ಪನ್ನವರ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪಿ.ಬಿ.ಬಡಿಗೇರ, ವಿಶ್ವಕರ್ಮ ಪ್ರತಿಷ್ಠಾನದ ಅಧ್ಯಕ್ಷ ಮೌನೇಶ್ವರ ಸುಳ್ಳದ, ಅಡಿಯಪ್ಪ ಬೇವೂರ, ಚಂದ್ರರಡ್ಡಿ ಹೂಲಿ, ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಪತ್ತಾರ ಇತರರು ಇದ್ದರು.

ಜನರ ಮನಸೆಳೆದ ಕಲಾ ಪ್ರದರ್ಶನ: 2ನೇ ದಿನವೂ ರಾಜ್ಯಮಟ್ಟದ ಪ್ರದರ್ಶನದಲ್ಲಿ ಛಾಯಾಚಿತ್ರ ಪ್ರದರ್ಶನ ಜನರ ಮನ ಸೆಳೆಯಿತು. ಪಾರಂಪರಿಕ ತಾಣಗಳು, ಗ್ರಾಮೀಣ ಸೊಗಡು, ಪ್ರಾಕತಿಕ ಛಾಯಾಚಿತ್ರಗಳು ನೋಡುಗರ ಗಮನ ಸೆಳೆದವು. ಇದರೊಂದಿಗೆ ಚಿತ್ರಕಲೆ, ಮಾರ್ಡನ್ ಆರ್ಟ್, ಪಾರಂಪರಿಕ ಚಿತ್ರಕಲೆ, ಅಲ್ಲದೇ ಕಾಷ್ಟಶಿಲ್ಪ ಹಾಗೂ ಲೋಹಶಿಲ್ಪ ಶಿಲ್ಪಕಲೆಗಳು ಜನರನ್ನು ರಂಜಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net