ಇತಿಹಾಸ ಪುಸ್ತಕಗಳಿಂದ ಸಾಮರಸ್ಯ ಸಮಾಜಕ್ಕೆ ಧಕ್ಕೆ

4HSN1 (1)
Published on

ಹಾಸನ: ರಾಬರ್ಟ್ ಕ್ಲೈವ್, ಮಹಮ್ಮದ್ ಘೋರಿ ಅಂತಹವರನ್ನು ನಾಯಕರೆಂದು ಪ್ರತಿಪಾದಿಸಿದ ಇತಿಹಾಸ ಪುಸ್ತಕಗಳು ಸಾಮರಸ್ಯ ಸಮಾಜಕ್ಕೆ ಧಕ್ಕೆ ತಂದವು ಎಂದು ವಿಜಯಪುರ ರಾಮಕೃಷ್ಣ ಮಠದ ಶ್ರೀನಿರ್ಭಯಾನಂದ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ನಂದಗೋಕುಲ ಸಭಾ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ರೋಟರಿ ಜಿಲ್ಲಾ ಸಮ್ಮೇಳನ ’ಸಂಪರ್ಕ’ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಇತಿಹಾಸವನ್ನು ಯಾರೂ ಸರಿಯಾಗಿ ಅರ್ಥೈಸಿಲ್ಲ. ಪಾಶ್ಚಾತ್ಯರೂ ಬರೆದ ಪುಸ್ತಕಗಳನ್ನೇ ಓದಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಅನ್ಯ ಮಾರ್ಗದಿಂದ ಸಾಮ್ರಾಜ್ಯ ವಿಸ್ತರಿಸಿದ ಮಹಮ್ಮದ್ ಘೋರಿಯನ್ನು ನಾಯಕನೆಂದು ಒಪ್ಪಬೇಕಾಯಿತು. ಬ್ರಿಟಿಷ್ ಸಾಮ್ರಾಜ್ಯದ ಎಂಪೈರ್ ಎನಿಸಿಕೊಂಡ ರಾಬರ್ಟ್ ಕ್ಲೈವ್‌ನ ಅನಾಚಾರಗಳನ್ನು ತಿಳಿಯಲೇ ಇಲ್ಲ. ಇತಿಹಾಸ ಪುಸ್ತಕ ಬರೆದವರಿಗೆ ಬುದ್ಧಿ ಇರಬೇಕಿತ್ತು. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಮಹತ್ತರ ಅಧ್ಯಯನ ಗ್ರಂಥಗಳು ಹೆಚ್ಚಾಗಿ ಬರಲಿಲ್ಲ. ಅರೆಬೆಂದ ಚರಿತ್ರೆ ಓದಿಕೊಂಡ ಮನುಷ್ಯ ಅವರಂತೆಯೇ ಸ್ವಾರ್ಥಿಯಾಗಬೇಕಾಯಿತು ಎಂದು ಅಭಿಪ್ರಾಯಪಟ್ಟರು.

ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಯಲು ಸಂಪರ್ಕ ಮುಖ್ಯವಾಗುತ್ತದೆ. ಆದರೆ ಭಾರತೀಯರು ವಿದೇಶಿ ಸಂಸ್ಕೃತಿಗೆ ಅಂಟಿಕೊಂಡ ಪರಿಣಾಮ ಧನಾತ್ಮಕ ಸಂಪರ್ಕ ಸಾಧ್ಯವಾಗಲಿಲ್ಲ. ಮೌಲ್ಯಗಳಲ್ಲಿ ನಂಬಿಕೆ ಇಲ್ಲದೆ ವ್ಯಕ್ತಿ ಸದಾ ಕೋಪ, ಮುನಿಸು, ಒತ್ತಡದಲ್ಲೇ ಬದುಕುತ್ತಿದ್ದಾನೆ. ಆತ್ಮೀಯ ಸ್ನೇಹಿತರು, ಒಬ್ಬರನ್ನೊಬ್ಬರು ಪ್ರೀತಿಸುವ ಗಂಡ ಹೆಂಡತಿ ಹಾಗೂ ತಾಯಿ-ಮಗುವಿನ ಸಂಬಂಧ ಯಾವತ್ತೂ ಹಳಸುವುದಿಲ್ಲ. ಏಕೆಂದರೆ ಅಲ್ಲಿ ಉತ್ಕಟ ಪ್ರೀತಿ ಮನೆ ಮಾಡಿರುತ್ತದೆ. ಅದೇ ರೀತಿಯ ವಾತಾವರಣ ಎಲ್ಲೆಡೆಯೂ ಪಸರಿಸಬೇಕು.

ನನ್ನ ಮನೆ, ನನ್ನ ರಾಜ್ಯ ಹಾಗೂ ದೇಶ ಎನ್ನುವ ಬದಲು ವಿಶ್ವವೇ ನನ್ನದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಹುಟ್ಟಬೇಕು. ವ್ಯವಹಾರ ದೃಷ್ಟಿ ಯಿಂದ ಎಲ್ಲವನ್ನೂ ಅಳೆಯಲು ಹೋದರೆ ಅದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಪ್ರೀತಿ, ಸಹಬಾಳ್ವೆ, ಸಂಯಮ ಹಾಗೂ ಸಹೋದರತ್ವ ಜೀವನದ ಗುರಿಯಾಗಬೇಕು ಎಂದರು.

ಸಮರ್ಥ ಶಿಕ್ಷಕ ಉತ್ತಮ ರಾಷ್ಟ್ರ ನಿರ್ಮಿಸಲು ನೆರವಾಗುತ್ತಾನೆ. ಮೋಸ ಮಾಡಿ ಗೆಲ್ಲುವುದಕ್ಕಿಂತ ನ್ಯಾಯ ಮಾರ್ಗದಲ್ಲಿ ಸಾಗಿ ಸೋತರೂ ಯಶಸ್ಸಿನ ಅರಿವು ನಮಗಾಗುತ್ತದೆ. ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸುವ ಕೆಲಸ ನಮ್ಮಿಂದಾಗಬೇಕು ಎಂದು ಹೇಳಿದರು.

ಭಾರತ ಎಂದಿಗೂ ವಿದೇಶಿಗರನ್ನು ಪರಕೀಯ ಭಾವನೆಯಿಂದ ಕಂಡಿಲ್ಲ. ವಸುದೈವ ಕುಟುಂಬಕಂ ಎನ್ನುವುದು ಈ ಮಣ್ಣಿನ ಗುಣ. ಆದರೆ ಆಶ್ರಯ ಬಯಸಿ ಬಂದ ಅದೆಷ್ಟೋ ಜನರು ಅವಘಡ ಸೃಷ್ಟಿಸಿದರು. ಇನ್ನಾದರೂ ಅಂತಹ ಸಮಸ್ಯೆಗಳಿಗೆ ಮುಕ್ತಿ ಕಲ್ಪಿಸಬೇಕಿದೆ ಎಂದು ಹೇಳಿದರು.
ರೋಟರಿ ನಿರ್ದೇಶಕ ಕಮಲ್ ಸಂಘ್ವಿ, ರೋಟರಿ ಜಿಲ್ಲಾ ಗವರ್ನರ್ ಬಿ.ಎನ್. ರಮೇಶ್, ಜಾನ್ಸನ್ ಫರ್ನಾಂಡಿಸ್, ಜಿಲ್ಲಾ ಕಾರ್ಯ ದರ್ಶಿ ಬಿ. ಪಾನಿಕುಮಾರ್, ಗೋವರ್ಧನ್ ಇತರರಿದ್ದರು.

ಶಾಲೆ ಅಭಿವೃದ್ಧಿಗೆ 2 ಲಕ್ಷ ರೂ. ದೇಣಿಗೆ: ನಗರದ ಸಂತೆಪೇಟೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಅಭಿವೃದ್ಧಿಗೆ 2 ಲಕ್ಷ ರೂ. ದೇಣಿಗೆ ನೀಡುವುದಾಗಿ ರೋಟರಿ ನಿರ್ದೇಶಕ ಕಮಲ್ ಸಿಂಘ್ವಿ ಘೋಷಿಸಿದರು.

ರೋಟರಿ ಪದಾಧಿಕಾರಿಗಳೊಂದಿಗೆ ಶನಿವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಅವರು, ಶಾಲಾ ಕಟ್ಟಡ ಅವ್ಯವಸ್ಥೆ ಕಂಡು ಸಹಾಯದ ಭರವಸೆ ನೀಡಿದರು. ಸಾಮಾಜಿಕ ಕಾರ್ಯಗಳಲ್ಲಿ ರೋಟರಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತದೆ. ಪದಾಧಿಕಾರಿಗಳಿಂದ ಸಂಗ್ರಹಿಸಿ 2 ಲಕ್ಷ ರೂ. ನೀಡಲಾಗುವುದು ಎಂದು ಮುಖ್ಯ ಶಿಕ್ಷಕರಿಗೆ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net