ಆರೋಗ್ಯದಿಂದ ಎಲ್ಲ ರಂಗದಲ್ಲೂ ಅಭಿವೃದ್ಧಿ

9 ckm 2
ಚಿಕ್ಕಮಗಳೂರಲ್ಲಿ ಏರ್ಪಡಿಸಿದ್ದ ಉಚಿತ ದಂತ ಮತ್ತು ನೇತ್ರ ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರವನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ರಮೇಶ್ ಉದ್ಘಾಟಿಸಿದರು. ಸುನೀಲ್, ನಾರಾಯಣ ಸ್ವಾಮಿ, ಟಿ.ಇ.ಬಾಲಕೃಷ್ಣ, ಡಾ.ಖಾದರ್, ಡಾ. ಕೆ.ಸುಂದರಗೌಡ ಇದ್ದರು.
Published on

ಚಿಕ್ಕಮಗಳೂರು: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾದರೆ ನಾವು ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ರಮೇಶ್ ಹೇಳಿದರು.
ನಗರದ ಜಿಲ್ಲಾ ಕಾರಾಗೃಹದಲ್ಲಿ ಲಯನ್ಸ್ ಇಂಟರ್ ನ್ಯಾಷನಲ್, ಜಿಲ್ಲಾ ಲಯನ್ಸ್ ಸಂಸ್ಥೆ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಖೈದಿಗಳಿಗೆ ಏರ್ಪಡಿಸಿದ್ದ ಉಚಿತ ದಂತ ಮತ್ತು ನೇತ್ರ ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿಶ್ವವನ್ನು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಸೂಕ್ಷ್ಮ ಅಂಗ ಕಣ್ಣು ಬದುಕಿಗೆ ಬೆಳಕಾಗಿರಬೇಕಾದರೆ ಸೂಕ್ತ ಸಮಯಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣು ಮಾನವನ ಅತ್ಯಂತ ಸೂಕ್ಷ್ಮ ಅಂಗವಾದರೆ ಹಲ್ಲು ನಮ್ಮ ದೇಹಕ್ಕೆ ಬೇಕಾದ ಶಕ್ತಿ ನೀಡಲು ಆಹಾರವನ್ನು ಚನ್ನಾಗಿ ಅಗಿಯಲು ಸಹಕಾರಿಯಾಗಿದೆ. ಹೀಗಾಗಿ ಹಲ್ಲುಗಳ ಆರೋಗ್ಯದ ಬಗ್ಗೆಯೂ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದರು.
ಸುವರ್ಣ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕಣ್ಣು ಹಾಗೂ ದಂತ ಸೇರಿದಂತೆ ಮಾನವ ಶರೀರದ ಪ್ರತಿಯೊಂದು ಅಂಗಾಂಗಗಳ ಬಗ್ಗೆ ಕಾಳಜಿ ವಹಿಸಬೇಕು. ಸಮಯಕ್ಕೆ ಸರಿಯಾಗಿ ತಪಾಸಣೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಮಾತನಾಡಿ, ತಜ್ಞ ವೈದ್ಯರಿಂದ ದಂತ ಹಾಗೂ ನೇತ್ರ ತಪಾಸಣೆ ನಡೆಸಲು ಬಂಧಿಗಳಿಗೆ ಅವಕಾಶವಿಲ್ಲ. ಇದನ್ನು ಅರಿತು ಲಯನ್ಸ್ ಕ್ಲಬ್ ಸಾರಥ್ಯದಲ್ಲಿ ಶಿಬಿರ ಏರ್ಪಡಿಸಲಾಗಿದೆ. ಇಂತಹ ಶಿಬಿರದಲ್ಲಿ ಕಾರಾಬಂಧಿಗಳು ಮುಕ್ತವಾಗಿ ಪಾಲ್ಗೊಳ್ಳುವ ಮೂಲಕ ಸಮಸ್ಯೆಗಳಿದ್ದರೆ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.
ಉಪ ಕಾನೂನು ಅಭಿರಕ್ಷಕ ಸುನೀಲ್, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ನಾರಾಯಣ ಸ್ವಾಮಿ, ಖಜಾಂಚಿ ಟಿ.ಇ.ಬಾಲಕೃಷ್ಣ, ವೈದ್ಯರಾದ ಡಾ.ಖಾದರ್, ಡಾ. ಕೆ.ಸುಂದರಗೌಡ, ಡಾ. ಮೇಘನ, ಡಾ. ಹರೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net