ದೊಡ್ಡಬಳ್ಳಾಪುರದಿಂದ ಧರ್ಮಸ್ಥಳ ಚಲೋ

25Dbp3DarmasthaRally
ದೊಡ್ಡಬಳ್ಳಾಪುರದ ಸೋಮೇಶ್ವರ ದೇವಾಲಯ ಬಳಿಯಿಂದ ಧರ್ಮಸ್ಥಳ ಯಾತ್ರೆಗೆ ಚಾಲನೆ ನೀಡಿದ ಪುಷ್ಪಾಂಡಜಮುನಿ ಆಶ್ರಮದ ಶ್ರೀದಿವ್ಯಜ್ಞಾನಾನಂದ ಸ್ವಾಮೀಜಿ, ಶಾಸಕ ಧೀರಜ್ ಮುನಿರಾಜು. ಬಿಜೆಪಿ ಮುಖಂಡರಾದ ಪುಷ್ಪಾ ಶಿವಶಂಕರ್, ಬಿ.ಸಿ ನಾರಾಯಣಸ್ವಾಮಿ, ಪ್ರೇಮ್ ಕುಮಾರ್, ಒಬದೇನಹಳ್ಳಿ ಮುನಿಯಪ್ಪ, ವೆಂಕಟೇಶ್, ನಾಗೇಶ್, ಮುದ್ದಣ್ಣ ಹಾಗೂ ಕಾರ್ಯಕರ್ತರು ಇದ್ದರು.
Published on

ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ನೂರಾರು ಕಾರುಗಳಲ್ಲಿ ರ‌್ಯಾಲಿ ಹೊರಟ ಕಾರ್ಯಕರ್ತರು

ದೊಡ್ಡಬಳ್ಳಾಪುರ: ಧರ್ಮಸ್ಥಳ ಮಂಜುನಾಥನ ಆಶೀರ್ವಾದದಿಂದ ತಪ್ಪಿತಸ್ಥರ ಬಂಧನವಾಗಿದೆ. ಧರ್ಮ ಕಾಪಾಡುತ್ತದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತಾಗಿ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರದ ವಿರುದ್ಧ ಸೋಮವಾರ ದೊಡ್ಡಬಳ್ಳಾಪುರದಿಂದ ಹಮ್ಮಿಕೊಂಡಿದ್ದ ಯಾತ್ರೆಯಲ್ಲಿ ಮಾತನಾಡಿದರು.

ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆರ್ಶೀವಾದದಿಂದ ದೊಡ್ಡಬಳ್ಳಾಪುರದಿಂದ ಶ್ರೀ ಕ್ಷೇತ್ರಕ್ಕೆ ಪ್ರಯಾಣಕ್ಕೆ ಕರೆ ನೀಡಲಾಗಿತ್ತು. ಇದರಲ್ಲಿ ನೂರಾರು ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದಾರೆ. ಕ್ಷೇತ್ರಕ್ಕೆ ತೆರಳಿ ಸ್ವಾಮಿಯ ಆರ್ಶೀವಾದ ಹಾಗೂ ಕ್ಷೇತ್ರದ ಧರ್ಮಾಧಿಕಾರಿಯವರ ಆಶೀರ್ವಾದ ಪಡೆದು ಬರುತ್ತೇವೆ. ಪ್ರಯಾಣ ಸುಖಕರವಾಗಿರಲಿ ಎಂದು ನಗರದ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗಿದೆ ಎಂದರು.

ಧರ್ಮಸ್ಥಳ ಯಾತ್ರಗೆ ಚಾಲನೆ ನೀಡಿ ಮಾತನಾಡಿದ ಪುಷ್ಪಾಂಡಜಮುನಿ ಆಶ್ರಮದ ಶ್ರೀ ದಿವ್ಯಜ್ಞಾನಾನಂದ ಸ್ವಾಮೀಜಿ, ಧರ್ಮಸ್ಥಳ ಕ್ಷೇತ್ರಕ್ಕೆ ಒಗ್ಗಟ್ಟಿನಿಂದ ಯಾತ್ರೆ ಹೊರಟಿರುವುದು ಉತ್ತಮ ಸಂಗತಿ. ಸತ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಇರಬೇಕು. ಹಿಂದು ಧರ್ಮದಲ್ಲಿ ಒಗ್ಗಟ್ಟು ಕಾಣುತ್ತಿರುವುದು ಸಂತಸ ತಂದಿದೆ. ಧರ್ಮಸ್ಥಳದ ಈ ಯಾತ್ರೆ ಸುಖಕರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ಧರ್ಮದ ಜಯವಾಗಿದೆ. ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದವರಿಗೆ ಬಂಧನವಾಗುತ್ತಿದೆ. ಈ ಯಾತ್ರೆಯಲ್ಲಿ ಬರುವವರು ನಿಧಾನವಾಗಿ , ಶಾಂತವಾಗಿ, ಸುರಕ್ಷಿತವಾಗಿ ಬನ್ನಿ ಎಂದು ಸಲಹೆ ನೀಡಿದರು.

ಸೋಮೇಶ್ವರ ದೇಗುಲದಲ್ಲಿ ಪೂಜೆ

ಯಾತ್ರೆಗೆ ಚಾಲನೆ ನೀಡುವ ಮುನ್ನ ನಗರದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಶಾಸಕ ಧೀರಜ್ ಮುನಿರಾಜು ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net