

ಬೆಳಗಾವಿ: ಆನ್‌ಲೈನ್ ಮೂಲಕ ಆಸೆ, ಆಮಿಷವೊಡ್ಡಿ ಜನರ ಬ್ಯಾಂಕ್ ಖಾತೆಗಳಿಂದ ಕೋಟಿ, ಕೋಟಿ ರೂಪಾಯಿ ಕೊಳ್ಳೆ ಹೊಡೆದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬೆಳಗಾವಿ ನಾಗರಿಕರನ್ನು ಬೆಚ್ಚಿ ಬೀಳಿಸಿವೆ.
ಜನವರಿಯಿಂದ ಈವರೆಗೆ (ಹತ್ತು ತಿಂಗಳ ಅವಧಿ) ಬೆಳಗಾವಿ ನಗರವೊಂದರಲ್ಲೇ 780 ಸೈಬರ್ ವಂಚನೆ ದೂರುಗಳು ದಾಖಲಾಗಿದ್ದು, ವಂಚಕರು ಒಟ್ಟು 2.40 ಕೋಟಿ ರೂ. ಹಣವನ್ನು ಜನರ ಖಾತೆಗಳಿಂದ ಕದ್ದಿದ್ದಾರೆ. ಪ್ರತಿಷ್ಠಿತ ಬ್ಯಾಂಕ್‌ವೊಂದರ ಮ್ಯಾನೇಜರ್‌ನ್ನು ಯಾಮಾರಿಸಿ 18 ಲಕ್ಷ ರೂ. ವಂಚಿಸಿದ್ದು, ಆತಂಕ ಸೃಷ್ಟಿಸಿದೆ. ಬ್ಯಾಂಕ್ ಮಾನೇಜರ್‌ಗೆ ಖಾತೆದಾರರ ಹೆಸರಿನಲ್ಲಿ ವಂಚಕರು ಇ-ಮೇಲ್ ಮಾಡಿ, ಖಾತೆಯಿಂದ ನಕಲಿ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದು ಗೊತ್ತಾದ ತಕ್ಷಣ ಬ್ಯಾಂಕ್ ಮ್ಯಾನೇಜರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರತಿದಿನವೂ ವಂಚಕರು ಜನರ ಹಣ ಕಬಳಿಸುವಂತಹ ಹತ್ತಾರು ಪ್ರಕರಣಗಳು ನಡೆಯುತ್ತಿವೆ.
ಕೈಗೆ ಸಿಗುತ್ತಿಲ್ಲ ವಂಚಕರು: ಮೋಸಹೋದ ಜನರು ನೀಡಿದ ದೂರಿನನ್ವಯ ವಂಚಕರ ಮೊಬೈಲ್ ನಂಬರ್, ಬ್ಯಾಂಕ್ ಖಾತೆಗೆ ಲಿಂಕ್ ಇರುವ ಆಧಾರ್ ಕಾರ್ಡ್ ವಿಳಾಸ ಜಾಡು ಹಿಡಿದು ಪೊಲೀಸರು ದೆಹಲಿ, ಹರಿಯಾಣ, ಗುರುಗಾಂವ, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ಮುಂಬೈ, ಪುಣೆಗೆ ತೆರಳಿ ಸ್ಥಳ ಪರಿಶೀಲಿಸಿದ್ದು, ವಂಚಕರು ಪತ್ತೆಯಾಗುತ್ತಿಲ್ಲ. ಶೋಧ ಕಾರ್ಯ ಮುಂದುರಿಸಿದ್ದಾರೆ. ಖದೀಮರು ನಕಲಿ ದಾಖಲೆಗಳನ್ನು ನೀಡಿ ಸಿಮ್ ಪಡೆದಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಕೆಲವು ಸೈಬರ್ ವಂಚಕರು ಬಾಡಿಗೆ ಮನೆ ವಿಳಾಸ ಹೊಂದಿದ್ದು, ಬಾಡಿಗೆ ಹಣ ಕೊಡದೆ ವಂಚಿಸಿದ್ದಾರೆ. ಈ ವಿಷಯ ಪೋಲಿಸರ ಪರಿಶೀಲನೆ ವೇಳೆ ಮನೆ ಮಾಲೀಕರಿಗೆ ಗೊತ್ತಾಗಿದೆ.
1.5 ಕೋಟಿ ರೂ. ಹಣ ಫ್ರೀಜ್: ಸೈಬರ್ ಪೋಲಿಸರು ವಂಚನೆ ಮಾಡಲು ತೆರೆದ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯ (ಫ್ರೀಜ್) ಮಾಡುವ ಮೂಲಕ 1.5 ಕೋಟಿ ರೂ. ಹಣ ವಂಚಕರಿಗೆ ವರ್ಗಾವಣೆಯಾಗುವುದನ್ನು ತಡೆದಿದ್ದಾರೆ. ಈ ಹಣವನ್ನು ದೂರುದಾರ ದಾಖಲೆಗಳನ್ನು ಪರಿಶೀಲಿಸಿ ಮರಳಿ ಅವರ ಖಾತೆಗೆ ಜಮಾ ಮಾಡಿಸುವ ಪ್ರಕ್ರಿಯೆ ನಡೆದಿದೆ.
ಹೀಗೆ ಮಾಡುತ್ತಾರೆ ವಂಚನೆ: ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಇಕೆವೈಸಿ ಮಾಡಿಸುವುದಾಗಿ ವಂಚಕರು ಕರೆ ಮಾಡಿ, ಒಟಿಪಿ ಪಡೆದು ಖಾತೆಗಳಿಂದ ಹಣ ಹೊಡೆಯುತ್ತಾರೆ. ಮೊಬೈಲ್ ನಂಬರ್‌ಗೆ ಪ್ರೈಜ್ ಮನಿ ಬಂದಿದೆ ಎಂದು ಲಿಂಕ್ ಶೇರ್ ಮಾಡುತ್ತಾರೆ. ಅದನ್ನು ಕ್ಲಿಕ್ ಮಾಡಿ, ಮಾಹಿತಿ ನೀಡುವ ಜನರು ವಂಚನೆಗೊಳಗಾಗುತ್ತಿದ್ದಾರೆ. ಇನ್ನು ಕಸ್ಟಮರ್ ಕೇರ್ ಹೆಸರಿನಲ್ಲಿ ಮಾಹಿತಿ ಪಡೆಯುವುದು, ಗಿಫ್ಟ್, ಹೂಡಿಕೆ, ಲೋನ್ ಆ್ಯಪ್‌ಗಳನ್ನು ಬಳಸಿ ಜನರನ್ನು ವಂಚಿಸುತ್ತಿದ್ದಾರೆ. ಉದ್ಯೋಗ ಕೊಡಿಸುವುದಾಗಿ, ಆನ್‌ಲೈನ್ ವಸ್ತುಗಳ ಖರೀದಿ ವೇಳೆಯೂ ಸೈಬರ್ ಕಳ್ಳರು ವಂಚಿಸುತ್ತಿದ್ದಾರೆ.
ಜನರು ವಂಚನೆಗೊಳಗಾಗಿದ್ದು ಗೊತ್ತಾದ ತಕ್ಷಣ ದೂರು (ಗೋಲ್ಡನ್ ಅವರ್) ದಾಖಲಿಸುವುದರಿಂದ ಪೊಲೀಸ್ ಠಾಣೆಗಳಲ್ಲಿ ಬ್ಯಾಂಕ್ ಖಾತೆಗಳಿಂದ ವ್ಯವಹಾರ ನಡೆಯದಂತೆ ತಡೆಹಿಡಿಯಬಹುದು. ಬಹಳಷ್ಟು ಜನರು ವಂಚನೆಗೊಳಗಾಗಿ 2-3 ದಿನ ಬಳಿಕ ದೂರು ದಾಖಲಿಸುವುದಕ್ಕೆ ಬರುತ್ತಿರುವುದರಿಂದ ವಂಚಕರು ಅಷ್ಟರಲ್ಲಿ ಖಾತೆಗಳಿಂದ ಹಣ ವರ್ಗಾಯಿಸಿಕೊಂಡಿರುತ್ತಾರೆ. ಇದರಿಂದ ಅವರ ಪತ್ತೆ ಸವಾಲಾಗುತ್ತದೆ. ಪತ್ತೆ ಮಾಡಲು ಹೋದರೆ ಸಿಮ್ ಸೇರಿ ಆಧಾರ್ ಕಾರ್ಡ್, ವಿಳಾಸ ಫೇಕ್ ಆಗಿರುತ್ತವೆ. ಜನರು ವಂಚನೆಗೊಳಗಾದರೆ ಕೇಂದ್ರದ ‘1930’ ಸೈಬರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬೇಕು ಎಂದು ಪೊಲೀಸರು ಹೇಳುತ್ತಾರೆ.
ವಂಚಕರು ವಿವಿಧ ಕಂಪನಿಗಳ ಸಿಮ್‌ಕಾರ್ಡ್‌ಗಳನ್ನು ಬಲ್ಕ್ ಆಗಿ ಖರೀದಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಕಂಪನಿಗಳು ನಿಖರವಾದ ವಿಳಾಸವಿರುವ ದಾಖಲೆ ಪಡೆಯುವುದನ್ನು ಮಾಡುತ್ತಿಲ್ಲ. ಇದರಿಂದ ವಂಚಕರ ಪತ್ತೆ ಕಷ್ಟವಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.
ಆನ್‌ಲೈನ್ ವಂಚನೆ ತಡೆಯುವುದಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ವಂಚಕರು ಹೇಳಿದಂತೆ ರಿಮೋಟ್ ಎಕ್ಸೆಸ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು. ಮೊಬೈಲ್‌ಗಳಿಗೆ ಬರುವ ಅಪರಿಚಿತ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು.| ಎಸ್.ಎನ್. ಸಿದ್ದರಾಮಪ್ಪ, ಪೊಲೀಸ್ ಆಯುಕ್ತ ಬೆಳಗಾವಿ
| ಜಗದೀಶ ಹೊಂಬಳಿ ಬೆಳಗಾವಿ