ಕರೊನಾದಿಂದ ಮೃತಪಟ್ಟವರಿಗೆ ಅಂತ್ಯಕ್ರಿಯೆ

26manjari1-Web
ಕರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡುವ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಪೇಟಲಾಯಿನ್ ಯುವಕ ಮಂಡಳದ ಸದಸ್ಯರು.
Published on

ಮಾಂಜರಿ: ಕರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವುದಕ್ಕೆ ಸ್ವತಃ ಕುಟುಂಬದವರೇ ಹಿಂದೇಟು ಹಾಕುತ್ತಿರುವುದನ್ನು ಎಲ್ಲೆಡೆ ನೋಡುತ್ತಿದ್ದೇವೆ. ಆದರೆ, ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಪೇಟಲಾಯಿನ್ ಯುವಕ ಮಂಡಳವು ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ಕಾರ್ಯದಲ್ಲಿ ತೊಡಗಿದೆ. ಕರೊನಾದಿಂದ ಮೃತಪಟ್ಟ ಆರು ಜನರ ಅಂತ್ಯಕ್ರಿಯೆಯನ್ನು ಈಗಾಗಲೇ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಸೋಂಕಿತ ವ್ಯಕ್ತಿ ಮೃತಪಟ್ಟರೆ ಈ ಯುವಕ ಮಂಡಳವು ಜೀವದ ಹಂಗು ತೊರೆದು ಶವ ಸಂಸ್ಕಾರ ಮಾಡುತ್ತಿದೆ. ಅಷ್ಟೇ ಅಲ್ಲದೆ ಉಚಿತ ಆಂಬುಲೆನ್ಸ್ ಸೇವೆ, ಅಗತ್ಯವಿದ್ದ ಕಡೆಗಳಲ್ಲಿ ಔಷಧ ವಿತರಿಸುವ ಕಾರ್ಯದಲ್ಲಿ ತೊಡಗಿ ಎಲ್ಲರ ಪ್ರಸಂಶೆಗೆ ಪಾತ್ರವಾಗಿದೆ. ಡಾ. ಸಂಜಯ ಬಾಳೇಕುಂದ್ರಿ ಅವರ ಮಾರ್ಗದರ್ಶನದಲ್ಲಿ ಚೇತನ ಸ್ವಾಮಿ, ಸುನೀಲ ಪಾಟೀಲ, ಬಾಹುಬಲಿ ಮಗದುಮ್, ಸಮೀರ್ ಅವರು ಸೇವೆಯಲ್ಲಿ ತೊಡಗಿದ್ದಾರೆ. ಕರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಒಡಹುಟ್ಟಿದವರೇ, ಸೋಂಕಿಗೆ ಬಲಿಯಾದವರ ಶವ ಒಯ್ಯುತ್ತಿಲ್ಲ. ಇಂತಹ ಅಮಾನವೀಯ ಘಟನೆಗಳು ಮುಂದೆ ನಡೆಯದಂತೆ ತಡೆಗಟ್ಟುವುದಕ್ಕೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ಎಂದು ಸೇವೆಯಲ್ಲಿ ನಿರತ ಯುವಕರು ಹೇಳುತ್ತಾರೆ.

ಯಾವುದೇ ಫಲಾಪೇಕ್ಷೆ ಇಲ್ಲ

ನಿಪ್ಪಾಣಿಯಲ್ಲಿ ಏಕತಾ ಫೌಂಡೇಶನ್ ಕರೊನಾ ಹಾವಳಿ ಸಂದರ್ಭದಲ್ಲಿ ಸಾರ್ವಜನಿಕರ ಸೇವೆ ಮಾಡುತ್ತಿದೆ. ಹಲವಾರು ಜನರು ಫೌಂಡೇಶನ್‌ನ ಸಹಾಯ ಪಡೆಯುತ್ತಿದ್ದಾರೆ. ಅದನ್ನೇ ಆದರ್ಶವಾಗಿಟ್ಟುಕೊಂಡು ನಾವು ಅಕ್ಕೋಳ ಗ್ರಾಮದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಕೈಗೊಂಡಿದ್ದೇವೆ ಎಂದು ಡಾ. ಸಂಜಯ ಬಾಳೇಕುಂದ್ರಿ, ಜಿಪಂ ಮಾಜಿ ಸದಸ್ಯ ಚೇತನ ಸ್ವಾಮಿ ತಿಳಿಸಿದ್ದಾರೆ.

| ಸಂತೋಷಕುಮಾರ ಕಾಮತ ಮಾಂಜರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net