

ಬೆಳಗಾವಿ: ‘ಸಂಸ್ಥೆಯ ಮಾಲೀಕರು ಎಂದುಕೊಳ್ಳದೆ ಗ್ರಾಹಕರು ಹೂಡಿಕೆ ಮಾಡಿರುವ ಹಣದ ಮೇಲ್ವಿಚಾರಕರು ಎನ್ನುವ ಮನಸ್ಥಿತಿಯಿಂದ ಸೇವೆ ಮಾಡುವುದೇ ಕಾಯಕ’, ಅಂತಹ ಕಾಯಕವನ್ನು ಶ್ರೀ ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಚ್ಚುಕಟ್ಟಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಸಂಸ್ಥೆ ಸಂಸ್ಥಾಪಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ನಗರದ ಶ್ರೀ ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪ್ರಧಾನ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ 2ನೇ ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಗದುಗಿನ ಸಿದ್ದನಗೌಡ ಪಾಟೀಲ ಅವರಿಂದ ಪ್ರಾರಂಭವಾದ ಸಹಕಾರ ಚಳವಳಿ ಮುಂದೆ ದಿ.ರತ್ನಪ್ಪಣ್ಣ ಕುಂಬಾರ, ದಿ.ಅಪ್ಪನಗೌಡ ಪಾಟೀಲ ಅವರಂತಹ ಅನೇಕ ಹಿರಿಯರಿಂದ ಬೆಳೆದು ಬಂದಿರುವ ಸಹಕಾರ ಕ್ಷೇತ್ರ ತನ್ನದೆಯಾದ ಇತಿಹಾಸ ಹೊಂದಿದೆ. ಸಹಕಾರಿಗಳ ಸದುದ್ದೇಶವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆ ಹುಟ್ಟು ಹಾಕಲಾಗಿದ್ದು, ಕಡಿಮೆ ಅವಧಿಯಲ್ಲಿ ಅತ್ಯತ್ತಮ ಸೇವೆ ನೀಡುವ ಮೂಲಕ ಸಂಸ್ಥೆ ಪ್ರಗತಿಯತ್ತ ದಾಪುಗಾಲಿಟ್ಟಿದೆ’ ಎಂದು ಹರ್ಷ ವ್ಯಕ್ತಪಡಿಸಿದರು. ಉಪಾಧ್ಯಕ್ಷ ರಾಜೇಂದ್ರ ಮುತಗೇಕರ, ನಿರ್ದೇಶಕರಾದ ಲಕ್ಷ್ಮೇಶ್ ಹುಂಡೇಕರ, ಸಿ.ಆರ್.ಪಾಟೀಲ, ಅರುಣ ಮಾನೆ, ಪ್ರಮೋದ ಕೊಚೇರಿ, ಸತೀಶ ಅಪ್ಪಾಜಿಗೋಳ, ಶಿವನಗೌಡ ಶಿವಯೋಗಿಮಠ, ಡಾ.ವಿನಿತಾ ಮೆಟಗುಡ್ಡಮಠ, ಡಾ.ಸಂತೋಷ ಪಾಟೀಲ ಮತ್ತು ವ್ಯವಸ್ಥಾಪಕ ಮಲ್ಲಿಕಾರ್ಜುನ ಕಾಂಬ್ಳೆ ಇತರರು ಇದ್ದರು. ಗಾಯತ್ರಿ ಬಡಿಗೇರ ಸ್ವಾಗತಿಸಿದರು. ರಾಜೇಶ್ವರಿ ಚವ್ಹಾಣ ನಿರೂಪಿಸಿದರು.
ಸಂಸ್ಥೆಯ ಅಧ್ಯಕ್ಷ ಶರತ್‌ಚಂದ್ರ ಕವಟಗಿಮಠ ವಾರ್ಷಿಕ ವರದಿ ಮಂಡಿಸಿ, 2023-24ನೇ ಸಾಲಿನಲ್ಲಿ ಒಟ್ಟು 790 ಷೇರು ಸದಸ್ಯರೊಂದಿಗೆ 36.61ಲಕ್ಷ ರೂ.ಷೇರು ಬಂಡವಾಳ, 12.91 ಕೋಟಿ ರೂ. ಠೇವಣಿ ಹೊಂದಿದೆ. 13.46 ಕೋಟಿ ರೂ. ದುಡಿಯುವ ಬಂಡವಾಳ ಹೊಂದುವ ಮೂಲಕ ಸಂಸ್ಥೆ ಅತ್ಯಲ್ಪ ಅವಧಿಯಲ್ಲಿ ಉತ್ತಮ ಸೇವೆ ಒದಗಿಸಿ ಜನರ ವಿಶ್ವಾಸ ಗಳಿಸಿದೆ. ಮುಂಬರುವ ದಿನಗಳಲ್ಲಿ ಬೆಳಗಾವಿ ದಕ್ಷಿಣ ಭಾಗದ ಶಹಾಪುರ, ಚಿಕ್ಕೋಡಿ ಹಾಗೂ ಗದಗನಲ್ಲೂ ಶಾಖೆ ಆರಂಭಿಸಲಾಗುವುದು ಎಂದರು.