

ನೆಲಮಂಗಲ: ಪಟ್ಟಣದ ಅಡೆಪೇಟೆಯಲ್ಲಿ ಸೇತುವೆ ಮರುನಿರ್ಮಾಣ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳ ಆರೋಗ್ಯಕ್ಕೆ ತೊಂದರೆಯಾಗಿದೆ.
ಪಟ್ಟಣದ ಅಡೇಪೇಟೆಯ ಶಿಥಿಲಾವಸ್ಥೆಯಲ್ಲಿದ್ದ ಹಳೇ ಸೇತುವೆ ನೆಲಸಮ ಮಾಡಿ ನಗರೋತ್ಥಾನ ಯೋಜನೆಯಲ್ಲಿ 30 ಅಡಿ ಅಗಲ, 33 ಅಡಿ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ 6 ತಿಂಗಳ ಹಿಂದೆಯಷ್ಟೆ ಆರಂಭಿಸಿದ್ದ ಗುತ್ತಿಗೆದಾರರು ಪೂರ್ಣಗೊಳಿಸದಿರುವುದು ಒಂದೆಡೆಯಾದರೆ ಕೆರೆಗೆ ಹರಿದು ಹೋಗುತ್ತಿದ್ದ ಕಲುಷಿತ ನೀರನ್ನು ಸೇತುವೆ ಬಳಿ ತಡೆಹಿಡಿಯಲಾಗಿದೆ. ಇದರಿಂದ ನಿಂತ ನೀರು ದುರ್ವಾಸನೆಗೆ ಎಡೆಮಾಡಿಕೊಟ್ಟಿದೆ. ಇನ್ನೊಂದೆಡೆ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿದ್ದು, ನಿವಾಸಿಗಳಲ್ಲಿ ಸಾಂಕ್ರಾಮಿಕ ಭೀತಿ ಆವರಿಸಿದೆ.
ಪಟ್ಟಣದ ಕೆರೆಗೆ ಹಾದುಹೋಗುವ ಪ್ರಮುಖ ರಾಜಕಾಲುವೆ ಇದಾಗಿದ್ದು, ಕಸವನ್ನು ಕಾಲುವೆಗೆ ಎಸೆದಿರುವುದು, ಶೌಚಗೃಹ ಕಲುಷಿತ ನೀರನ್ನು ರಾಜಕಾಲುವೆಗಳಿಗೆ ಹರಿಬಿಟ್ಟಿರುವುದರಿಂದ ಹೆಚ್ಚು ದುರ್ವಾಸನೆ ಬರಲಾರಂಭಿಸಿದೆ. ಇತ್ತೀಚೆಗಷ್ಟೆ ಸೇತುವೆ ಕಾಮಗಾರಿ ಸ್ಥಗಿತಗೊಂಡಿದ್ದು, ಹೆಚ್ಚಿನ ಸಮಸ್ಯೆಗಳಾಗುತ್ತಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲದಿರುವುದು ನಿವಾಸಿಗಳ ಬೇಸರಕ್ಕೆ ಕಾರಣವಾಗಿದೆ.
ಸೇತುವೆ ಹಿನ್ನೆಲೆ: ಪಟ್ಟಣದ ಮೂಲಕ ಹಾದುಹೋಗಿದ್ದ ರಾ.ಹೆದ್ದಾರಿಗೆ ಅಡ್ಡಲಾಗಿ 1890ರ ದಶಕದಲ್ಲಿ ಸೇತುವೆ ನಿರ್ಮಿಸಿದ್ದು, ಕೆರೆಗೆ ನೀರು ಹರಿದು ಹೋಗಲು ಅವಕಾಶ ಮಾಡಿಕೊಡಲಾಗಿತ್ತು. ಒಂದೂವರೆ ದಶಕದಿಂದಲೂ ಶಿಥಿಲಾವ್ಯವಸ್ಥೆ ತಲುಪಿದ್ದು, ಆಗಿಂದಾಗ್ಗೆ ಸೇತುವೆ ಕುಸಿದು ಅನಾಹುತಗಳಿಗೆ ಆಹ್ವಾನ ನೀಡುತ್ತಿತ್ತು. ತಾತ್ಕಾಲಿಕವಾಗಿ ಅನೇಕ ಬಾರಿ ದುರಸ್ತಿ ಮಾಡಿದರೂ ಸೇತುವೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿರಲಿಲ್ಲ. ಆದರೆ 6 ತಿಂಗಳ ಹಿಂದಷ್ಟೆ ಹಳೇ ಸೇತುವೆ ನೆಲಸಮಮಾಡಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು.
ದೇಶ ವಿದೇಶಗಳಲ್ಲಿ ಕರೊನಾ ವೈರಸ್ ಹರುಡುವಿಕೆ ಭೀತಿಯಲ್ಲಿ ಜನ ಬದುಕುತ್ತಿರುವ ಸನ್ನಿವೇಶದಲ್ಲಿ ಕಾಮಗಾರಿ ವಿಳಂಬದಿಂದ ನಿತ್ಯ ದುರ್ವಾಸನೆಯಲ್ಲಿ ಕಾಲಕಳೆಯುವಂತಾಗಿದ್ದು, ಅನಾರೋಗ್ಯದ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ವೃದ್ಧೆ ಆಯಿಷಾಖಾನಂ ಮನವಿ ಮಾಡಿದ್ದಾರೆ.
ಸೇತುವೆ ಕಾಮಗಾರಿ ಆರಂಭಗೊಂಡ ಕೆಲ ದಿನಗಳಲ್ಲೇ ಹೆಚ್ಚಿನ ಮಳೆ ಬಂದಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಗುತ್ತಿಗೆದಾರರನ್ನು ಸಂಪರ್ಕಿಸಿದ್ದು, ಪೂರ್ಣಗೊಳಿಸುವ ಜತೆಗೆ ರಾಜಕಾಲುವೆ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಗಂಗಾಧರ್‌ರಾವ್, ಪುರಸಭೆ ಸದಸ್ಯ ಸೇತುವೆ ಕಾಮಗಾರಿ ವಿಳಂಬದಿಂದಾಗಿರುವ ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದು, ಗುತ್ತಿಗೆದಾರರಿಗೆ ಕೂಡಲೇ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ಶೀಘ್ರದಲ್ಲಿ ಅಗತ್ಯ ಕ್ರಮಕೈಗೊಂಡು ನಾಗರಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಜಯಪ್ಪ, ನಗರಸಭೆ ಪ್ರಭಾರ ಪೌರಾಯುಕ್ತ