ಪಕ್ಷಿಗಳಿಂದ ಪರಿಸರ ಸಮತೋಲನ

FotoJet (1)
Published on

ಅರಣ್ಯಾಧಿಕಾರಿ ರಾಜೇಶ್ ಗವಾಲ್ ಮಾಹಿತಿ ತಿಮ್ಮಕ್ಕ ಉದ್ಯಾನದಲ್ಲಿ ಗಣತಿ ಕಾರ್ಯ

ಶಿಡ್ಲಘಟ್ಟ: ನಾವು ಇಂದು ಆರೋಗ್ಯಯುತ ಬದುಕು ನಡೆಸುತ್ತಿರುವುದಕ್ಕೆ ಸುತ್ತಲಿನ ಪ್ರಕೃತಿಯೇ ಕಾರಣ ಎಂದು ಪ್ರಾದೇಶಿಕ ಅರಣ್ಯ ವಲಯದ ಅರಣ್ಯಾಧಿಕಾರಿ ರಾಜೇಶ್ ಗವಾಲ್ ತಿಳಿಸಿದರು.

ನಗರದ ಹೊರವಲಯದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪರಿಸರ ಭದ್ರತಾ ಪ್ರತಿಷ್ಠಾನ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಕ್ಷಿಗಳ ಗಣತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವದಾದ್ಯಂತ ಫೆ.14ರಿಂದ 17ರವರೆಗೆ 4 ದಿನ ಪಕ್ಷಿಗಳ ಗಣತಿ (ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್ ಕೌಂಟಿಂಗ್) ನಡೆಯುತ್ತಿದೆ. ಪರಿಸರ ಸಮತೋಲನದಲ್ಲಿ ಪಕ್ಷಿಗಳ ಪಾತ್ರ, ಪಕ್ಷಿ ಸಂಕುಲಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುವುದು. ಮತ್ತು ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ಇದರಿಂದ ಪಕ್ಷಿಸಂಕುಲವನ್ನು ಉಳಿಸಲು ಕ್ರಮಗಳನ್ನು ಕೈಗೊಳ್ಳಲು ಮತ್ತು ಯೋಜನೆ ರೂಪಿಸಲು ನೆರವಾಗುತ್ತದೆ. ಜಗತ್ತಿನಲ್ಲಿ 11,500 ವಿವಿಧ ಜಾತಿ ಪಕ್ಷಿಗಳಿವೆ. ದೇಶದಲ್ಲಿ 1200ರಿಂದ 1300 ಜಾತಿಯ ಪಕ್ಷಿಗಳು ಕಂಡುಬರುತ್ತದೆ. ತಾಲೂಕಿನಲ್ಲಿ 150-250 ಜಾತಿ ಪಕ್ಷಿಗಳನ್ನು ಕಾಣಬಹುದಾಗಿದೆ ಎಂದರು.

ಉಪ ವಲಯ ಅರಣ್ಯಾಧಿಕಾರಿ ಜಯಚಂದ್ರ, ಅರಣ್ಯ ಇಲಾಖೆಯ ಲೋಕೇಶ್, ಕಾಶಿನಾಥ್, ನವೀನ್ ಹಾಗೂ ಎಫ್‌ಇಎಸ್ ಸಂಸ್ಥೆಯ ನರೇಂದ್ರಬಾಬು, ರಮೇಶ್ ಮತ್ತು ವರದನಾಯಕನಹಳ್ಳಿ ಸರ್ಕಾರಿ ಶಾಲೆ ಮಕ್ಕಳು ಭಾಗವಹಿಸಿದ್ದರು.

ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ

ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆ (ಎಫ್‌ಇಎಸ್ ಸಂಸ್ಥೆ) ಉಪಯೋಜನಾಧಿಕಾರಿ ಎಸ್.ಜಿ. ಗೋಪಿ ಮಾತನಾಡಿ, ಪರಿಸರದ ಮೇಲಿನ ಮಾನವನ ದಬ್ಬಾಳಿಕೆ, ಅತಿಕ್ರಮಣ, ಅತಿಯಾದ ರಸಗೊಬ್ಬರ ಬಳಕೆ, ಕ್ರಿಮಿನಾಶಕಗಳ ಬಳಕೆಯಿಂದ ಪಕ್ಷಿಸಂಕುಲ ಕ್ಷೀಣಿಸುತ್ತಿದೆ. ಜತೆಗೆ ಪ್ಲಾಸ್ಟಿಕ್ ಬಳಯಿಂದ ಪರಿಸರ ಹಾಳಾಗುತ್ತಿದೆ. ಪಕ್ಷಿ ಸಂತತಿ ಕ್ಷೀಣಿಸುತ್ತಿದೆ. ರಾಜ ಕಾಲುವೆ, ಪೋಷಕ ಕಾಲುವೆಗಳನ್ನು ಒತ್ತುವರಿ ಮಾಡಿ ಕೆರೆ, ಕುಂಟೆ, ಜಲಾಶಯಗಳಿಗೆ ನೀರು ಹೋಗದಂತೆ ಮಾಡಿರುವುದು ಕೂಡ ಪಕ್ಷಿ ಸಂಕುಲ ನಾಶಕ್ಕೆ ಕಾರಣ. ಪರಿಸರ ಸಮತೋಲನಕ್ಕೆ, ಪಕ್ಷಿ, ಪ್ರಾಣಿ ಸಂತತಿ ಉಳಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net