

ಗಜೇಂದ್ರಗಡ: ಹಾಲಕೆರೆ ಅನ್ನದಾನೇಶ್ವರ ಮಠವು ಸರ್ವ ಜನಾಂಗದ ಏಳಿಗೆಗೆ ಶ್ರಮಿಸಿದ ಧರ್ಮ ಕ್ಷೇತ್ರವಾಗಿದೆ. ನ. 25ರಿಂದ ಡಿ. 26ರವರೆಗೆ ಪಟ್ಟಣದ ಎಪಿಎಂಸಿ ಬಯಲು ಜಾಗದಲ್ಲಿ ನಡೆಯುವ ಬಸವ ಪುರಾಣವು ಸೌಹಾರ್ದ ಎತ್ತಿ ಸಾರುವುದಾಗಿದೆ ಎಂದು ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಹಾಲಕೆರೆ ಅನ್ನದಾನೇಶ್ವರ ಮಠ ಗಜೇಂದ್ರಗಡ-ಹಾಲಕೆರೆ ವತಿಯಿಂದ ಆಯೋಜಿಸಿರುವ ಬಸವ ಪುರಾಣ ಅಂಗವಾಗಿ ಜರುಗಿದ ಸಭೆಯಲ್ಲಿ ಮುಸ್ಲಿಮರಿಗೆ ಆಹ್ವಾನ ನೀಡಿ ಅವರು ಮಾತನಾಡಿದರು. ಪುರಾಣದ ಮುಖ್ಯ ಉದ್ದೇಶವೇ ಸಮಾಜದಲ್ಲಿ ಸಮಾನತೆ, ಸಹಿಷ್ಣುತೆ ಹಾಗೂ ಸೌಹಾರ್ದದ ಕೊಂಡಿಯನ್ನು ಬಲಪಡಿಸುವುದಾಗಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ ಸಿದ್ದಣ್ಣ ಬಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮಲ್ಲಿನ ಸೌಹಾರ್ದದ ಬೆಸುಗೆಯನ್ನು ಮುಂದಿನ ಯುವ ಪೀಳಿಗೆಗೆ ಹಾಗೂ ಸಮಾಜಕ್ಕೆ ಒಂದು ಮಾದರಿಯಾಗುವಂತೆ ಈ ಪುರಾಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪುರಸಭೆ ಸದಸ್ಯ ರಾಜು ಸಾಂಗ್ಲೀಕಾರ, ಟೆಕ್ಕದ ದರ್ಗಾದ ಹಜರತ್ ನಿಜಾಮುದ್ದಿನ್ ಶಾ ಮಕಾನದಾರ ಮಾತನಾಡಿದರು. ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಹಾಲಕೇರಿಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.
ಅಂಜುಮನ್ ಇಸ್ಲಾಂ ಕಮಿಟಿ ಚೇರ್ಮನ್ ಹಸನಸಾಬ್ ತಟಗಾರ, ಮೌಲಾನ ಶಾಹೀದ ರಜಾ, ಪುರಸಭೆ ಸದಸ್ಯ ಮುರ್ತಜಾ ಡಾಲಾಯತ್, ಕಸಾಪ ಅಧ್ಯಕ್ಷ ಎ.ಪಿ. ಗಾಣಗೇರ, ಮಹಾಂತೇಶ ಸೋಮನಕಟ್ಟಿ, ಬಾಬುಸಾಬ್ ಗೋಡೆಕಾರ, ಕೆ.ಡಿ. ಕಟ್ಟಿಮನಿ, ನಾಸರಲಿ ಸುರಪುರ, ದಾದು ಹಣಗಿ, ಬಾಷೇಸಾಬ್ ಮುದಗಲ್ಲ, ಮುರ್ತಜಾ ಜಾಲಿಹಾಳ, ಶರಣಪ್ಪ ರೇವಡಿ, ಕೆ.ಇ. ಗೋಡೇಕಾರ, ಆಸೀಫ್ ತಟಗಾರ, ಸಲೀಂ ಮನಿಯಾರ, ಇಮ್ರಾನ್ ಅತ್ತಾರ, ದಾವಲಸಾಬ್ ತಾಳಿಕೋಟಿ, ಇತರರಿದ್ದರು.