

ಅಥಣಿ: ಸುಕ್ಷೇತ್ರ ಶ್ರೀ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳ 104ನೇ ಜಾತ್ರಾ ಮಹೋತ್ಸವ ಏ.10ರಿಂದ 16ರ ವರೆಗೆ ಜರುಗಲಿದ್ದು, ಜಾತ್ರಾ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕೆಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಶ್ರೀಮಠದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕಾಡಳಿತ ಹಾಗೂ ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರೆ ಅಂಗವಾಗಿ ಪ್ರತಿನಿತ್ಯ ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಏ.13ರಂದು ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ನೆರವೇರಲಿದೆ. ಇದರ ಅಂಗವಾಗಿ ರಾಜ್ಯಮಟ್ಟದ ಸ್ಪರ್ಧೆಗಳು, ಪಂದ್ಯಾವಳಿ ಹಾಗೂ ಜಾನುವಾರುಗಳ ಪ್ರದರ್ಶನ ನೆರವೇರಲಿದ್ದು, ತಾಲೂಕಾಡಳಿತ, ಪೊಲೀಸ್ ಇಲಾಖೆಯ ಸಹಕಾರ ಅಗತ್ಯವಿದೆ ಎಂದರು.
ರಥೋತ್ಸವದಂದು ಮದ್ಯಪಾನ ನಿಷೇಧಿಸಿದರೆ ಉತ್ತಮ ಎಂದು ಅಧಿಕಾರಿಗಳಿಗೆ ತಿಳಿಸಿದರು. ತಹಸೀಲ್ದಾರ್ ಸಿದರಾಯ ಭೋಸಗೆ ಮಾತನಾಡಿ, ತಾಲೂಕಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಚಿದಾನಂದ ಸವದಿ ಮಾತನಾಡಿ, ಶ್ರೀಮಠದ ಮಹಾದ್ವಾರ, ಗುರುಭವನ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು. ಡಿವೈಎಸ್‌ಪಿ ಪ್ರಶಾಂತ ಮುನ್ನೋಳಿ, ಮುಖಂಡ ಶಿವಾನಂದ ದಿವಾನಮಳ, ಸುನೀಲ ಸಂಕ ಪ್ರಾಸ್ತಾವಿಕ ಮಾತನಾಡಿದರು. ಸಿಪಿಐ ಸಂತೋಷ ಹಳ್ಳೂರ, ವಕೀಲ ಕೆ.ಎ.ವನಜೋಳ, ಕಂದಾಯ ನಿರೀಕ್ಷಕ ಎಸ್.ಬಿ.ಮೆನಸಂಗಿ, ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಮಹಾಂತೇಶ ಉಕ್ಕಲಿ ಇತರರಿದ್ದರು.