31ರಿಂದ ರಾಮ ದರ್ಶನ ಅಭಿಯಾನ

21Manju3-web
ಬೆಳಗಾವಿ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅನಿಲ ಬೆನಕೆ ಮಾತನಾಡಿದರು. ಸುಭಾಷ ಪಾಟೀಲ, ಮಂಗಲ ಅಂಗಡಿ, ಗೀತಾ ಸುತಾರ, ಸಂಜಯ ಪಾಟೀಲ ಇತರರಿದ್ದರು.
Published on

ಬೆಳಗಾವಿ: ಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮುಗಿದ ಬಳಿಕ ಜ.31ರಿಂದ ಮಾರ್ಚ್ 25ರವರೆಗೆ ರಾಜ್ಯದ ರಾಮ ಭಕ್ತರಿಗೆ ಅಯೋಧ್ಯೆ ರಾಮ ದರ್ಶನ ಅಭಿಯಾನ ಹಮ್ಮಿಕೊಳ್ಳ ಲಾಗಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ತಿಳಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಗೆ ತೆರಳಲು ರಾಜ್ಯದ ವಿವಿಧ 25 ಸ್ಥಳಗಳಿಂದ 25 ನೇರ ವಿಶೇಷ ರೈಲು ನಿಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ರಾಮಭಕ್ತರು ರಾಮ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು ಆರು ದಿನಗಳ ಈ ಪ್ರವಾಸದಲ್ಲಿ ಪ್ರತಿಯೊಬ್ಬರಿಗೂ 3 ಸಾವಿರ ರೂ. ವೆಚ್ಚವಾಗಲಿದೆ. ಇದನ್ನು ರಾಮ ಭಕ್ತರೇ ಭರಿಸಬೇಕು ಎಂದರು. ಅಯೋಧ್ಯೆ ಪ್ರವಾಸ ಪ್ರಾರಂಭದಿಂದ ಮರಳಿ ಬರುವವರೆಗೆ ಕನ್ನಡದಲ್ಲಿ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗಿದ್ದು, ಪ್ರಬಂಧಕರನ್ನು ನಿಯೋಜಿಸಲಾಗುತ್ತಿದೆ. ರಾಮಭಕ್ತರಿಗೆ ರೈಲ್ವೆಯಲ್ಲಿ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಅಯೋದ್ಯೆಯಲ್ಲಿ 48 ಕಡೆ ಪ್ರಸಾದ ಇದ್ದು, ಅದರಲ್ಲಿ 2 ಕಡೆ ಕರ್ನಾಟಕ ರಾಮ ಭಕ್ತರಿಗೆ ಮೀಸಲಿದೆ. ವಸತಿಗಾಗಿ ಆಧುನಿಕ ಜರ್ಮನ್ ಟೆಂಟ್ ನಿರ್ಮಿಸಲಾಗಿದೆ. ದಿನ ಒಂದಕ್ಕೆ ಒಂದು ರೈಲಿನಲ್ಲಿ 1500 ರಾಮಭಕ್ತರು ತೆರಳಲಿದ್ದು, ವೈಯಕ್ತಿಕ ಮಾಹಿತಿಯುಳ್ಳ ಕ್ಯೂ ಆರ್ ಕೋಡ್ ಪತ್ರ ನೀಡಲಾಗುವುದು ಎಂದು ಹೇಳಿದರು.

ರಾಮಮಂದಿರ ನಿರ್ಮಾಣದ ಕಾರ್ಯದ ಪ್ರಮುಖ ಸ್ಥಾನದಲ್ಲಿ ರಾಜ್ಯದವರೇ ಇದ್ದಾರೆ. ಅದರಲ್ಲಿ ಬೆಳಗಾವಿಯ ಗೋಪಾಲಜಿ ಜಿಲ್ಲೆಯ ಗೌರವ. ಬಾಲರಾಮನ ಮೂರ್ತಿಗೆ ಉಪಯೋಗಿಸಿರುವ ಶಿಲೆ ಕರ್ನಾಟಕದ ಹೆಗ್ಗಡೆ ದೇವನ ಕೋಟೆಯದು. ಶಿಲ್ಪಿ ಮೈಸೂರಿನ ಅರುಣ ಯೋಗರಾಜ, ಮಂದಿರ ನಿರ್ಮಾಣದಲ್ಲಿ ಕರ್ನಾಟಕದ 6 ಜನ ಶಿಲ್ಪಿಗಳು ಕಾರ್ಯ ಮಾಡಿದ್ದು, ರಾಮಮಂದಿರದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಮಾತನಾಡಿ, ಜ.22ರಂದು ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ ಶಬರಿಕೊಳ್ಳದಲ್ಲಿ ಸಾವಿರಕ್ಕೂ ಅಧಿಕ ಕಾರ್ಯಕರ್ತರು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.

ಸಂಸದೆ ಮಂಗಲ ಅಂಗಡಿ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಮುರುಘೇಂದ್ರ ಪಾಟೀಲ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಶರದ ಪಾಟೀಲ, ಉಜ್ವಲಾ ಬಡವನಾಚೆ, ಸಂತೋಷ ದೇಶನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net