

ಮೈಸೂರು: ರಂಗಭೂಮಿ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ವೀರ ಸಾವರ್ಕರ್ ಕುರಿತ ‘ಕರಿನೀರ ವೀರ’ ನಾಟಕ ಪ್ರದರ್ಶನವನ್ನು ಜ.29ರಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಈ ನಾಟಕ ಮೊದಲ ಮೊದಲ ಹಂತದಲ್ಲಿ 22 ಪ್ರದರ್ಶನ ಕಂಡಿದೆ. ಇದೀಗ ಎರಡನೇ ಹಂತದಲ್ಲಿ 18 ಪ್ರದರ್ಶನ ಆಯೋಜಿಸಲಾಗಿದೆ ಎಂದು ನಾಟಕದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.29 ಮತ್ತು 30ರಂದು ಸಂಜೆ 6.30ಕ್ಕೆ ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಬಳಿಕ ಫೆ.3 ರಿಂದ ಮಾರ್ಚ್ 3 ರವರೆಗೆ ರಾಜ್ಯಾದ್ಯಂತ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಫೆ.3 ಮತ್ತು 4ರಂದು ಶಿವಮೊಗ್ಗದಲ್ಲಿ, 6ರಂದು ಶಿಕಾರಿಪುರದಲ್ಲಿ, 7 ರಂದು ಸಾಗರದಲ್ಲಿ, 9 ರಂದು ಹೊನ್ನಾಳಿ, 10 ಮತ್ತು 11ರಂದು ದಾವಣಗೆರೆ, 13 ರಂದು ಚಿತ್ರದುರ್ಗ, 15 ರಂದು ತುಮಕೂರು, 16ರಂದು ಗುಬ್ಬಿ, 22 ರಂದು ಕಲ್ಲಡ್ಕದಲ್ಲಿ ನಾಟಕ ಪ್ರದರ್ಶನವಾಗಲಿದೆ. ಬಳಿಕ ಫೆ.18ರಿಂದ ಮಾರ್ಚ್ 3ರವರೆಗೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 9 ಪ್ರದರ್ಶನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾವರ್ಕರ್ ಒಬ್ಬ ಕ್ರಾಂತಿ ಪುರುಷ, ರಾಷ್ಟ್ರೀಯತೆಯ ಅಪ್ರತಿಮ ನಾಯಕ, ಹಿಂದುತ್ವದ ಪ್ರಹರಿ, ರಾಷ್ಟ್ರೀಯ ನೀತಿಜ್ಞ. ಆದರೆ ಇವರನ್ನು ಕುರಿತ ಅನೇಕ ಸತ್ಯಗಳನ್ನು ಮುಚ್ಚಿ ಹಾಕಲಾಗಿತ್ತು. ಹೀಗಾಗಿ ಹಲವಾರು ವರ್ಷ ಅಧ್ಯಯನ ಮಾಡಿ ಕನ್ನಡದಲ್ಲಿ ಇದೇ ಮೊದಲು ಸಾವರ್ಕರ್ ಕುರಿತ ನಾಟಕ ರಚಿಸಿ, ನಾನೇ ನಿರ್ದೇಶಿಸಿದ್ದೇನೆ ಎಂದು ತಿಳಿಸಿದರು.
ನನ್ನ ನಾಟಕ ಕುರಿತಂತೆ ಅನೇಕ ಆರೋಪಗಳಿವೆ. ಆದರೆ, ಅವೆಲ್ಲ ಕೇವಲ ಆರೋಪಗಳಷ್ಟೆ. ಅಂತಹ ಸಂದರ್ಭದಲ್ಲೇ ವಿಮರ್ಶೆ ಸಾಧ್ಯ. ಇದ್ದುದ್ದನ್ನು ಇದ್ದ ಹಾಗೇ ಹೇಳಿದರೆ ಎಂಬ ಕನ್ನಡ ಗಾದೆ ಮಾತು ಈ ವೇಳೆ ನೆನಪಾಗುತ್ತದೆ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿ ಅನಿತಾ ಕಾರ್ಯಪ್ಪ, ಹೋರಾಟಗಾರ ಅರವಿಂದ್ ಶರ್ಮಾ, ಕಲಾವಿದರಾದ ಸುನೀಲ್, ಸೂರ್ಯಗೌಡ ಇದ್ದರು.