

ಮಾನ್ವಿ: ಪಟ್ಟಣದ ಕಲ್ಮಠದಲ್ಲಿ 50ನೇ ವರ್ಷದ ದಸರಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಸೆ.22 ರಿಂದ ಅ.6 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುವರ್ಣ ದಸರಾ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಕಲ್ಮಠದ ಆವರಣದಲ್ಲಿ ಭಾನುವಾರ ಕಲ್ಮಠ ಸುವರ್ಣ ದಸರಾ ಮಹೋತ್ಸವದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಲ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯರು ಪ್ರಾರಂಭಿಸಿದ ದಸರಾ ಹಬ್ಬವು 50 ವರ್ಷ ಕಳೆದಿದೆ. ಹೀಗಾಗಿ ಈ ವರ್ಷ ಸುವರ್ಣ ದಸರಾ ಮಹೋತ್ಸವ ವಿಶೇಷವಾಗಿ ಆಚರಿಸಲಾಗುತ್ತಿದೆ. ವಿವಿಧ ಮಠಾಧೀಶರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಸಚಿವರಾದ ಈಶ್ವರ ಖಂಡ್ರೆ, ಶಿವರಾಜ ತಂಗಡಗಿ, ಶಾಸಕರು, ಜನಪ್ರತಿನಿಧಿಗಳು, ಸಾಹಿತಿಗಳು, ಗಣ್ಯರು ಆಗಮಿಸಲಿದ್ದಾರೆ. ಜಿಲ್ಲೆಯ 9 ಮಹಿಳಾ ಸಾಧಕಿಯರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಲ್ಮಠ ವಿರೂಪಾಕ್ಷ ಪಂಡಿತ ಶಿವಾಚಾರ್ಯರು ಮಾತನಾಡಿ, ಕಲ್ಮಠದ ಅವರಣದಲ್ಲಿ ಸೆ.22 ರಿಂದ ಅ.1ರವರೆಗೆ ಪ್ರತಿದಿನ ಸಂಜೆ ಶ್ರೀದೇವಿ ಪುರಾಣ, ಸೆ.22 ರಿಂದ ಸೆ.30 ರವರೆಗೆ ಲೋಕಕಲ್ಯಾಣಕ್ಕಾಗಿ ಬೆಳಗ್ಗೆ 7 ರಿಂದ 10:30 ರವರೆಗೆ ಮಹಾ ಚಂಡಿಕಾಯಾಗ, ಬಾಲ ಮುತ್ತೈದೆಯರಿಗೆ ಪಾದ ಪೂಜೆ, ಸೆ.30 ರಂದು ಸರ್ವಧರ್ಮ ಸಮ್ಮೇಳನ, ಅ.1ರಂದು 1008 ಮುತ್ತೈದೆಯರಿಗೆ ಉಡಿತುಂಬುವುದು, ಅ.2ರಂದು ಬನ್ನಿ ಮುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಲ್ಮಠ ಸುವರ್ಣ ದಸರಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಹಂಪಯ್ಯನಾಯಕ, ಮಾಜಿ ಶಾಸಕ ಗಂಗಾಧರನಾಯಕ ಮಾತನಾಡಿದರು. ನೀಲಗಲ್ ಮಠದ ರೇಣುಕಾ ಶಾಂತಮಲ್ಲ ಸ್ವಾಮೀಜಿ, ವೀರ ಸಂಗಮೇಶ್ವರ ಸ್ವಾಮೀಜಿ, ಅರುಣಚಂದಾ, ಹರಿಹರ ಪಾಟೀಲ್, ದೊಡ್ಡಬಸಪ್ಪಗೌಡ ಭೋಗಾವತಿ, ವೀರನಗೌಡ ವಕೀಲರು, ಕೃಪಾಸಾಗರ ಪಾಟೀಲ್ ಇತರರಿದ್ದರು.