17ರಿಂದ ಅನ್ಯ ರಾಜ್ಯಗಳಿಗೆ ವಲಸಿಗರು ತೆರಳಲು ರೈಲುಗಳ ವ್ಯವಸ್ಥೆ, ಬಳ್ಳಾರಿ ಡಿಸಿ ಎಸ್.ಎಸ್ ನಕುಲ್ ಮಾಹಿತಿ

03052020 Bellary DC S S Nakul
Published on

ಬಳ್ಳಾರಿ: ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ ಸೇರಿ ಅನ್ಯ ರಾಜ್ಯಗಳ 11300 ವಲಸಿಗರು ಸೇವಾ ಸಿಂಧುವಿನಲ್ಲಿ ನೋಂದಾಯಿಸಿಕೊಂಡಿದ್ದು, ಅವರು ಸ್ವಂತ ಊರಿಗೆ ತೆರಳಲು ಎರಡು ರೈಲುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇ 17ರಂದು ಹೊಸಪೇಟೆಯಿಂದ ಎರಡು ರೈಲುಗಳಲ್ಲಿ ಉತ್ತರಪ್ರದೇಶಕ್ಕೆ ವಲಸಿಗರನ್ನು ಕಳಿಸಲಾಗುವುದು. ರೈಲ್ವೆ ನಿಲ್ದಾಣದವರೆಗೆ ಕಳುಹಿಸಲು ಬಸ್‌ಗಳ ವ್ಯವಸ್ಥೆ ಮಾಡಿದ್ದು, ವಲಸಿಗರಿದ್ದ ಸ್ಥಳದಿಂದಲೇ ಕರೆದೊಯ್ಯಲಾಗುತ್ತದೆ. ಮೇ 18 ಅಥವಾ 19ರಂದು ಬಿಹಾರಕ್ಕೆ ಬಳ್ಳಾರಿಯಿಂದ ರೈಲುಗಳು ಹೊರಡಲಿವೆ. ಇದಾದ ನಂತರ ಜಾರ್ಖಂಡ್ ರಾಜ್ಯಕ್ಕೂ ಕೂಡ ರೈಲುಗಳ ಮೂಲಕ ವಲಸಿಗರನ್ನು ಕಳಿಸಲಾಗುವುದು ಎಂದರು.

ಅನ್ಯರಾಜ್ಯದಿಂದ ಜಿಲ್ಲೆಗೆ ಬಂದ 1402 ವಲಸಿಗರಿಗೆ ವಿವಿಧೆಡೆ ಕ್ವಾರಂಟೈನ್ ಮಾಡಲಾಗಿದೆ. ಅವರನ್ನು ಹೈರಿಸ್ಕ್, ಮಿಡ್ಲ್ ರಿಸ್ಕ್ ಮತ್ತು ಲೋ ರಿಸ್ಕ್ ರಾಜ್ಯಗಳಿಂದ ಆಗಮಿಸಿದ ಆಧಾರದ ಮೇರೆಗೆ ಕ್ವಾರಂಟೈನ್‌ನಲ್ಲಿಟ್ಟ 12ನೇ ದಿನದಿಂದಲೇ ಗಂಟಲು ಮತ್ತು ಮೂಗಿನ ದ್ರವ್ಯ ಸಂಗ್ರಹಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ನೀಡುತ್ತಿರುವ ಚಿಕಿತ್ಸೆ ಕುರಿತ ವರದಿ ಪ್ರತಿ ತಿಂಗಳು ಒದಗಿಸಬೇಕು. ಹರಪನಳ್ಳಿ ಆಸ್ಪತ್ರೆಗೆ ನಿನ್ನೆ ಭೇಟಿ ಪರಿಶೀಲಿಸಿದ್ದು, ಚಿಕಿತ್ಸಾ ಕ್ರಮ ಸರಿ ಇಲ್ಲ. ಮುಂದೆ ಹೀಗಾಗಿ ನೋಡಿಕೊಳ್ಳಬೇಕು ಎಂದು ಡಿಎಚ್‌ಒ ಜನಾರ್ದನ್‌ಗೆ ಡಿಸಿ ನಕುಲ್ ಸೂಚಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 17 ಕರೊನಾ ಪ್ರಕರಣಗಳು ದೃಢಪಟ್ಟಿವೆ. ಆ ಪೈಕಿ 13 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 4 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಅಪರ ಜಿಲ್ಲಾಧಿಕಾರಿ ಮಂಜುನಾಥ, ವಿಮ್ಸ್ ನಿರ್ದೇಶಕ ದೇವಾನಂದ, ಎಸಿ ರಮೇಶ ಕೋನರೆಡ್ಡಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net