ಮಳೆಗಾಗಿ ಕಾತರಿಸಿದೆ ಇಳೆ..

27bkl story
Published on

ಭಟ್ಕಳ: ಇನ್ನೇನು ಜೂನ್ ಮುಗಿಯುತ್ತ ಬಂತು. ಪ್ರತಿ ವರ್ಷ ಇಷ್ಟೊತ್ತಿಗೆ ಭತ್ತದ ಗದ್ದೆಗಳಲ್ಲಿ ಫಸಲು ಚಿಗುರೊಡೆದು ಆಕಾಶ ನೋಡುತ್ತ ನಿಲ್ಲುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ತೀರ ಭಿನ್ನವಾಗಿದ್ದು ರೈತರು ಖಾಲಿ ಗದ್ದೆಯನ್ನು ನೋಡುವಂತಾಗಿದೆ.

ಗ್ರಾಮೀಣ ಭಾಗ ಸೇರಿದಂತೆ ತಾಲೂಕಿನ ಎಲ್ಲಿಯೂ ಕೃಷಿ ಚಟುವಟಿಕೆ ಗರಿಗೆದರಿಲ್ಲ. ಒಟ್ಟಾರೆ ಈ ಬಾರಿ ಕರಾವಳಿ ಭಾಗದಲ್ಲಿ ಭತ್ತ ಕೃಷಿಯ ಹಿನ್ನಡೆ ಕಾಣುತ್ತಿದೆ. ಕಳೆದ ಎರಡು-ಮೂರು ವರ್ಷದಿಂದ ಸಹಜ ಮಳೆ ಕಡಿಮೆಯಾಗಿ ಚಂಡಮಾರುತ ಆಶ್ರಿತ ಮಳೆ ಆಗುತ್ತಿದೆ. ಇದು ಭೂಮಿಯನ್ನು ಒದ್ದೆ ಮಾಡುತ್ತದೆಯೇ ಹೊರತು ತಂಪು ಹುಟ್ಟಿಸುವುದಿಲ್ಲ. ನದಿಗಳು ಒಣಗಿ ಹೋಗಿರುವುದಕ್ಕೆ ಇದೇ ಕಾರಣ ಎನ್ನುವ ಅಭಿಪ್ರಾಯವನ್ನು ಪರಿಸರ ತಜ್ಞರು ವ್ಯಕ್ತಪಡಿಸಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಸುರಿದೇ ಇಲ್ಲ. ಕಳೆದ ವಾರ ಒಂದೆರಡು ದಿನ ಮಳೆ ಆರ್ಭಟಿಸಿರುವುದು ಬಿಟ್ಟರೆ ಬಳಿಕ ನಾಪತ್ತೆಯಾಗಿದೆ. ಜೂನ್ ತಿಂಗಳು ಮಳೆಗಾಲದ ಸೀಜನ್. ಈ ವೇಳೆ ನದಿ-ಕೊಳ್ಳಗಳು ತುಂಬಿ ಹರಿಯಬೇಕಿತ್ತು. ಆದರೆ, ಇದ್ಯಾವುದೂ ಆಗಿಲ್ಲ. ಕುಡಿಯುವುದಕ್ಕೇ ನೀರು ಸಾಕಾಗದಿರುವಾಗ ಬೀಜ ಬಿತ್ತಿ ನೀರು ಹಾಯಿಸುವುದು ಎಲ್ಲಿಂದ... ಎಂದು ರೈತರು ಬೇಸರದಿಂದ ಕಣ್ಣೀರು ಸುರಿಸುವಂತಾಗಿದೆ.

ತಾಲೂಕಿನಲ್ಲಿ 2145 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಉತ್ಪಾದನೆ ಗುರಿ ಇದೆ. ಅತಿ ನೀರು ನಿಲ್ಲುವ 95 ಹೆಕ್ಟೇರ್ ಗದ್ದೆಗಳಲ್ಲಿ ಕೃಷಿ ಆರಂಭವಾಗಿದೆ. ತಾಲೂಕಿನಲ್ಲಿ 750 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 655 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ಕೆಜಿ ಬೀಜಕ್ಕೆ 8 ರೂ. ಹಾಗೂ ಎಸ್‌ಸಿಎಸ್ಟಿಗೆ 12 ರೂ. ಸಬ್ಸಿಡಿ ಇದೆ. ಹಸಿರೆಲೆ ಗೊಬ್ಬರ, ಡಿಎಪಿ, ಎಂಒಪಿ, ಎನ್‌ಪಿಕೆ ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿ 100 ಟನ್ ವಿವಿಧ ರಸಗೊಬ್ಬರ ಸ್ಟಾಕ್ ಇದೆ. ಜ್ಯೋತಿ, ಜಯ ತಳಿ ಬೀಜಗಳು ಲಭ್ಯ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೆಲ್ಲ ಇದ್ದು ಮಳೆ ಕೈಕೊಟ್ಟರೆ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ಹೀಗಾಗಿ, ಮಳೆಗಾಗಿ ಜನರು ದೇವರ ಮೊರೆ ಹೋಗುತ್ತಿದ್ದಾರೆ.

ಕೃಷಿಗೆ ಮಳೆಯ ಕೊರತೆಯೇ ದೊಡ್ಡ ಹಿನ್ನಡೆ. ಜೂನ್‌ನಲ್ಲಿ ಸಸಿಗಳು ಮೇಲೆ ಬರಬೇಕಿತ್ತು. ಆದರೆ, ಇಲ್ಲಿಯವರೆಗೂ ಗದ್ದೆಯನ್ನು ಹದ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆ ಸ್ವಲ್ಪ ಆಸೆ ಹುಟ್ಟಿಸಿತ್ತು. ಆದರೆ ಎರಡು ದಿನಗಳ ನಂತರ ಮಳೆ ಮತ್ತೆ ನಾಪತ್ತೆಯಾಗಿದ್ದು ಈ ಬಾರಿ ದೇವರೇ ನಮ್ಮನ್ನು ಕಾಪಾಡಬೇಕು. ಚಂದ್ರಕಾಂತ ಕೊಲ್ಲುರು ನಾಯ್ಕ, ಕೃಷಿಕ, ಶಿರಾಲಿ ಬಡ್ಡುಕುಳಿ

ನಮ್ಮಲ್ಲಿ ಬಿತ್ತನೆ ಬೀಜ, ಗೊಬ್ಬರ ಸಾಕಷ್ಟು ದಾಸ್ತಾನು ಇದ್ದು, ಜ್ಯೋತಿ ಹಾಗೂ ಇನ್ನಿತರ ಭತ್ತದ ಬೀಜಗಳು ಲಭ್ಯವಿವೆ. ಕಳೆದ ಸಾಲಿನಲ್ಲಿ ಇಷ್ಟೊತ್ತಿಗೆ ಬೀಜ ದಾಸ್ತಾನು ಮುಗಿದು ಹೋಗಿತ್ತು. ಮುಂಗಾರು ಹಾಗೂ ಹವಾಮಾನ ವೈಪರೀತ್ಯ ಕೃಷಿಗೆ ಹಿನ್ನಡೆ ಉಂಟು ಮಾಡುತ್ತಿದೆ. ಮಳೆ ಬಂದು ಗದ್ದೆಯಲ್ಲಿ ನೀರಾದ ನಂತರ ಬೀಜ ಬಿತ್ತಿ ಸಸಿ ಮಾಡಿಕೊಂಡು ಕೃಷಿ ಮಾಡಬೇಕಾದ ಸ್ಥಿತಿ ಇದೆ. ಮೇಘನಾ, ಸಹಾಯಕ ಕೃಷಿ ಅಧಿಕಾರಿ, ಕೃಷಿ ಇಲಾಖೆ ಭಟ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net