

ಉಡುಪಿ: ಮಹಾಮಾರಿ ಕರೊನಾ ವೈರಸ್ ಉಡುಪಿ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ 54 ವರ್ಷ ವಯಸ್ಸಿನ ವ್ಯಕ್ತಿ ಹೃದಯಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ವ್ಯಕ್ತಿ ಬೈಂದೂರು ತಾಲೂಕಿನವರಾಗಿದ್ದು, ಮುಂಬೈನಿಂದ ಪಾಸ್ ಪಡೆದುಕೊಂಡು ಜಿಲ್ಲೆಗೆ ಆಗಮಿಸಿ ಕುಂದಾಪುರದ ಕ್ವಾರೆಂಟೈನ್ ಕೇಂದ್ರದಲ್ಲಿದ್ದರು. ಅವರನ್ನು ಕುಂದಾಪುರದಲ್ಲಿ ಸರ್ಕಾರಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 13ರಂದು ಸಾಯಂಕಾಲ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
14ರಂದು ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಪರಿಶೀಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಸಂಭವಿಸಿದ ಹೃದಯಘಾತದಿಂದ ಅವರು ಮೃತಪಟ್ಟರು ಎಂದು ಜಿಲ್ಲಾಧಿಕಾರಿ ವಿವರಿಸಿದರು. ಸರ್ಕಾರದ ಕೊವಿಡ್-19 ನಿಯಮಾನುಸಾರ ಮೃತ ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಶನಿವಾರ ವರದಿ ಬಂದಿದೆ. ಮೃತ ವ್ಯಕ್ತಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಡಿಸಿ ತಿಳಿಸಿದರು.
ಸಂಪರ್ಕದಲ್ಲಿದ್ದ 57 ಮಂದಿ ಕ್ವಾರಂಟೈನ್: ಮೃತಪಟ್ಟ ಕರೊನಾ ಸೋಂಕು ಹೊಂದಿದ್ದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ, ಪ್ರೈಮರಿ, ಸೆಕೆಂಡರಿ ಕಾಂಟಾಕ್ಟ್‌ಗಳನ್ನು ಜಿಲ್ಲಾಡಳಿತ ಸಂಪೂರ್ಣ ಪರಿಶೀಲನೆಗೆ ಒಳಪಡಿಸಿದೆ. ಇದರಲ್ಲಿ ಮೃತಪಟ್ಟ ಸೋಂಕಿತ ವ್ಯಕ್ತಿಯು 57 ಮಂದಿ ಪ್ರೈಮರಿ ಕಾಂಟಾಕ್ಟ್ , 38 ಮಂದಿ ಸೆಕೆಂಡರಿ ಕಾಂಟಾಕ್ಟ್ ಆದವರನ್ನು ಪತ್ತೆ ಮಾಡಿದ್ದಾರೆ. ಪ್ರಯಾಣ ಸಮಯದಲ್ಲಿ ಜತೆಗಿದ್ದ ಐವರು, ಮಣಿಪಾಲ ಆಸ್ಪತ್ರೆಯ ಮೂವರು ಸಿಬ್ಬಂದಿ, ಮತ್ತು ಕ್ವಾರಂಟೈನ್ ಹಾಲ್‌ನಲ್ಲಿದ್ದವರು ಪ್ರೈಮರಿ, ಸೆಕೆಂಡರಿ ಕಾಂಟಾಕ್ಟ್‌ನಲ್ಲಿದ್ದಾರೆ. ಇವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಎಲ್ಲರನ್ನೂ ಕೋವಿಡ್-19 ಪರೀಕ್ಷೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮ ಪಾಲಿಸಲಾಗಿತ್ತು: ವ್ಯಕ್ತಿ ಮುಂಬೈನಿಂದ ಬಂದಿದ್ದರಿಂದ ಅವರಿಗೆ ಕ್ವಾರಂಟೈನ್ ಸೀಲ್ ಹಾಕಲಾಗಿತ್ತು. ಶಂಕಿತ ಕೋವಿಡ್-19 ಎಂದೇ ಅವರಿಗೆ ಆರೋಗ್ಯ ಸೇವೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದ್ದ ಕುಂದಾಪುರ ಸರ್ಕಾರಿ ಆಸ್ಪತ್ರೆ, ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು, ನರ್ಸ್, ಸಿಬ್ಬಂದಿ ಸಾಕಷ್ಟು ಮುಂಜಾಗ್ರತಾ ಕ್ರಮ ಅನುಸರಿಸಿದ್ದರು. ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡಿದ್ದರು. ಆರೋಗ್ಯ ಇಲಾಖೆ ಪ್ರೊಟೊಕಾಲ್ ಪ್ರಕಾರ ಇವರನ್ನು ಕ್ವಾರಂಟೈನ್‌ಗೆ ಒಳಪಡಿಸಿ, ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ 109 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 6, ಇಲ್‌ನೆಸ್‌ಗೆ ಸಂಬಂಧಿಸಿ 5 , ಕೊವಿಡ್-19 ಸಂಪರ್ಕ 3 , ಹಾಟ್‌ಸ್ಪಾಟ್‌ನಿಂದ ಬಂದವರು 95 ಮಂದಿ ಸೇರಿದಂತೆ ಒಟ್ಟು 109 ಮಂದಿಯ ಮಾದರಿಯನ್ನು ಶನಿವಾರ ಸಂಗ್ರಹಿಸಲಾಗಿದೆ. 20 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 133 ಮಂದಿಯ ವರದಿ ಬರಲು ಬಾಕಿ ಇದೆ. ಶನಿವಾರ 91 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಜಿ.ಜಗದೀಶ್ ಜಿಲ್ಲಾಧಿಕಾರಿ, ಉಡುಪಿ
ದ.ಕ ಹೊಸ ಪ್ರಕರಣವಿಲ್ಲ: ಮಂಗಳೂರು: ದ.ಕ ಜಿಲ್ಲೆಯಲ್ಲಿ ಶನಿವಾರ ಯಾವುದೇ ಹೊಸ ಕೋವಿಡ್ ಪ್ರಕರಣ ವರದಿಯಾಗಿಲ್ಲ.
ಒಟ್ಟು 106 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 10, ಎನ್‌ಐಟಿಕೆಯಲ್ಲಿ 30 ಮಂದಿ ಕ್ವಾರಂಟೈನ್ ಆಗಿದ್ದಾರೆ. 77 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಬಂದಿರುವ ಎಲ್ಲ 167 ಸ್ಯಾಂಪಲ್ ನೆಗೆಟಿವ್. ಇನ್ನೂ 65ರ ವರದಿ ಬರಲು ಬಾಕಿ ಇದೆ. 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ನಿಗಾದಲ್ಲಿ ಇರಿಸಲಾಗಿದೆ. ಉಸಿರಾಟ ತೊಂದರೆಯ 4 ಪ್ರಕರಣಗಳು ವರದಿಯಾಗಿವೆ.
ಶನಿವಾರ ಜಿಲ್ಲೆಯಲ್ಲಿ ಒಟ್ಟು 8 ಕಂಟೈನ್‌ಮೆಂಟ್ ವಲಯಗಳಿವೆ. ಉಪ್ಪಿನಂಗಡಿಯ ನಿರ್ದಿಷ್ಟ ಪ್ರದೇಶ, ಬಂಟ್ವಾಳ ಕಸ್ಬಾ, ಫಸ್ಟ್ ನ್ಯೂರೊ ಆಸ್ಪತ್ರೆ, ಬಂಟ್ವಾಳ ನರಿಕೊಂಬು, ಕುಲಶೇಖರ ಕಕ್ಕಬೆಟ್ಟು, ಬೋಳೂರು, ಸೋಮೇಶ್ವರ ಪಿಲಾರ್ ಹಾಗೂ ಸುರತ್ಕಲ್ ಸಮೀಪದ ಗುಡ್ಡಕೊಪ್ಪ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ತಿರುವನಂತಪುರಂನಿಂದ ನವದೆಹಲಿಗೆ ತೆರಳುವ ವಿಶೇಷ ರೈಲು ಮಂಗಳೂರು ಜಂಕ್ಷನ್‌ಗೆ ಶನಿವಾರ ಬೆಳಗ್ಗೆ ಆಗಮಿಸಿದೆ. ಕೇರಳದಿಂದ ಬಂದಿದ್ದ 99 ಮಂದಿ ಇಳಿದಿದ್ದು, ಮಂಗಳೂರಿನಿಂದ 193 ಮಂದಿ ರೈಲಿನಲ್ಲಿ ತೆರಳಿದ್ದಾಗಿ ರೈಲ್ವೆ ಮೂಲಗಳು ತಿಳಿಸಿವೆ. ಬಂದಿರುವ ಪ್ರಯಾಣಿಕರನ್ನು ತಪಾಸಣೆ ಬಳಿಕ ನಗರದ ಕದ್ರಿಯ ಶಾಲೆಯಲ್ಲಿ ನಿಗಾವಣೆಯಲ್ಲಿ ಇರಿಸಲಾಗಿದೆ.