ಅಪೂರ್ವ ಗೆಳೆಯ ರಾಜಾಹುಲಿ

BSY And Shankar rao
Published on

ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದಾ ಮುಂದಿರುತ್ತಾರೆ. ಇದಕ್ಕೆ ಪೂರಕವಾದ ಹಲವಾರು ನಿದರ್ಶನಗಳು ಅವರ ರಾಜಕೀಯ ಜೀವನದ ಉದ್ದಕ್ಕೂ ಕಾಣಬಹುದು. ಕೇವಲ ಕೊಟ್ಟ ಮಾತು ಮಾತ್ರವಲ್ಲ ಗೆಳೆತನ ಉಳಿಸಿಕೊಳ್ಳುವಲ್ಲೂ ಅವರು ಸದಾ ಮುಂದು. ರಾಜಕೀಯ ಜಂಜಾಟದ ನಡುವೆಯೂ ಅವರು ಬಾಲ್ಯದ ಗೆಳೆಯರನ್ನು ಮರೆತ್ತಿಲ್ಲ. ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಪ್ರಯುಕ್ತ ಯಡಿಯೂರಪ್ಪ ಅವರ ಬಾಲ್ಯದ ಗೆಳೆಯರಾದ ಓರಿಯಂಟಲ್ ಇನ್ಸೂರೆನ್ಸ್‌ನ ನಿವೃತ್ತ ಹಿರಿಯ ವಿಭಾಗಾಧಿಕಾರಿ ಎಸ್. ಶಂಕರ್ ರಾವ್ ಅವರು ಯಡಿಯೂರಪ್ಪ ಅವರೊಂದಿಗಿನ ಗೆಳೆತನದ ಮಧುರ ಕ್ಷಣಗಳನ್ನು ‘ವಿಜಯವಾಣಿ’ ಎದುರು ತೆರೆದಿಟ್ಟಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನ ಬಾಲ್ಯದ ಗೆಳೆಯ, ಬಾಲ್ಯದ ದಿನಗಳಿಂದ ಇಂದಿನವರೆಗೂ ನಾವಿಬ್ಬರು ಆಪ್ತ ಗೆಳೆಯರು. ಎಷ್ಟೇ ರಾಜಕೀಯ ಜಂಜಾಟವಿದ್ದರೂ ನಾವಿಬ್ಬರು ಮಾತಿಗೆ ಕುಳಿತಾಗ ಅವರು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ಹಗುರಾಗುತ್ತಾರೆ. ಇಂದಿಗೂ ಅವರನ್ನು ಭೇಟಿಯಾದಾಗ ಅವರು ಹಳೆಯ ನೆನಪುಗಳನ್ನೇ ಹೆಚ್ಚಾಗಿ ಮೆಲುಕು ಹಾಕುತ್ತಾರೆ.

ಯಡಿಯೂರಪ್ಪ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಅವರು ಬಾಲ್ಯದ ನೆನಪುಗಳನ್ನು, ಬಾಲ್ಯದ ಸ್ನೇಹಿತನಾದ ನನ್ನನ್ನು ಮರೆಯಲಿಲ್ಲ. ಇಂದಿಗೂ ನಾವು ಆಗಿಂದಾಗೆ ಭೇಟಿ ಮಾಡುತ್ತೇವೆ. ಸಾಕಷ್ಟು ಬಾರಿ ದೇಶ, ವಿದೇಶ ಪ್ರವಾಸ ಮಾಡಿದ್ದೇವೆ. ಯಡಿಯೂರಪ್ಪ ಅವರು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಂಟಿಕೊಪ್ಪಲಿನಲ್ಲಿರುವ ನಮ್ಮ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಾರೆ.

ಯಡಿಯೂರಪ್ಪ ಹಾಗೂ ನನ್ನ ಸ್ನೇಹ ಪ್ರಾರಂಭವಾಗಿದ್ದು ಏಳು ದಶಕಗಳ ಹಿಂದೆ, ಮಂಡ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ. ಇಂದಿಗೂ ಈ ಶಾಲೆ ಹಳೆಯ ತಾಲೂಕು ಕಚೇರಿ ಆವರಣದಲ್ಲಿ ಇದೆ. ಯಡಿಯೂರಪ್ಪ ಅವರು ಬೂಕನಕೆರೆ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿವರೆಗೆ ವ್ಯಾಸಂಗ ಮಾಡಿದರು. ಆ ಸಂದರ್ಭ ಅವರ ತಾಯಿ ತೀರಿಕೊಂಡ ಹಿನ್ನೆಲೆಯಲ್ಲಿ ಮಂಡ್ಯದಲ್ಲಿರುವ ತಾತನ ಮನೆಗೆ (ತಾಯಿಯ ತಂದೆ) ಆಗಮಿಸಿ ನಾನು ಓದುತ್ತಿದ್ದ ಶಾಲೆಯಲ್ಲಿ 6ನೇ ತರಗತಿಗೆ ದಾಖಲಾದರು. ಅಲ್ಲಿಂದ ದ್ವಿತೀಯ ಪಿಯುಸಿವರೆಗೆ ನಾವಿಬ್ಬರು ಒಟ್ಟಿಗೆ ಓದಿದೆವು.

ನಾವಿಬ್ಬರು ಒಂದೇ ಬೆಂಚಿನಲ್ಲಿ ಕುಳಿತು ಪಾಠ ಪ್ರವಚನ ಕೇಳುತ್ತಿದ್ದೆವು. ಮಂಡ್ಯದಲ್ಲಿ ನನ್ನ ಹಾಗೂ ಯಡಿಯೂರಪ್ಪ ಅವರ ಮನೆ ಅಕ್ಕಪಕ್ಕದಲ್ಲಿಯೇ ಇತ್ತು. ಅಲ್ಲದೆ, ನಾವಿಬ್ಬರು ಶಾಲೆ ಮುಗಿಸಿಕೊಂಡು ಸಂಜೆ ಆರ್‌ಎಸ್‌ಎಸ್ ಶಾಖೆಗೆ ಹೋಗುತ್ತಿದ್ದೆವು. ಹಾಗಾಗಿ ನಮ್ಮ ನಡುವೆ ಗೆಳೆತನ ಮತ್ತಷ್ಟು ಗಟ್ಟಿಯಾಯಿತು.

ಯಡಿಯೂರಪ್ಪ ಅವರ ಹಣೆಯ ಮೇಲೆ ಇಂದಿಗೂ ಗಾಯದ ಗುರುತ್ತೊಂದು ಇದೆ. ಇದು ಮಂಡ್ಯದ ಆರ್‌ಎಸ್‌ಎಸ್ ಶಾಖೆಯಲ್ಲಿ ಗೆಳೆಯರೆಲ್ಲ ಸೇರಿ ಆಟವಾಡುತ್ತಿದ್ದ ಸಂದರ್ಭ ಆದ ಗಾಯದ ಗುರುತು. ನಾವೆಲ್ಲ ಸೇರಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಸಂದರ್ಭ ಯಡಿಯೂರಪ್ಪ ಓಡುವ ರಭಸದಲ್ಲಿ ಅವರ ಹಣೆ ಕಬ್ಬಿಣದ ವಿದ್ಯುತ್ ಕಂಬಕ್ಕೆ ಬಡಿದು ಗಾಯಗೊಂಡರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆವು. ಬಾಲ್ಯದಲ್ಲಿ ಆದ ಆ ಗಾಯದ ಗುರುತು ಇನ್ನು ಮಾಸಿಲ್ಲ.

ಯಡಿಯೂರಪ್ಪ ಅವರಿಗೆ ನಾಯಕತ್ವ ಗುಣ ಸಣ್ಣ ವಯಸ್ಸಿನಲ್ಲಿಯೇ ಇತ್ತು. ಒಮ್ಮೆ ನಾನು ಮತ್ತು ಯಡಿಯೂರಪ್ಪ ಮೈಸೂರು ದಸರಾ ನೋಡಲು ಮಂಡ್ಯದಿಂದ ಮೈಸೂರಿಗೆ ತೆರಳಲು ಮಂಡ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದೆವು. ದಸರಾ ಪ್ರಯುಕ್ತ ವಿಶೇಷ ಬಸ್ ಸಂಚಾರ ವ್ಯವಸ್ಥೆ ಇತ್ತು. ವಿಶೇಷ ಬಸ್ ಸಂಚಾರಕ್ಕೆ ಕನಿಷ್ಠ 25 ಜನರಾದರೂ ಇರಬೇಕೆಂಬ ಷರತ್ತು ಇತ್ತು. ಆದರೆ, ಬಸ್ ಪ್ರಯಾಣಕ್ಕೆ 25ಕ್ಕೂ ಹೆಚ್ಚು ಜನರು ಕಾಯ್ದು ಕೂತರೂ ಬಸ್ ಸಂಚರಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಯಡಿಯೂರಪ್ಪ ಬಸ್ ನಿಲ್ದಾಣದ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಬಸ್ ಹೊರಡಿಸುವಲ್ಲಿ ಯಶಸ್ವಿಯಾದರು. ಸಮಸ್ಯೆಗಳು, ಅನ್ಯಾಯ ಕಂಡರೆ ಅದರ ವಿರುದ್ಧ ಸಿಡಿದೇಳುವ ಗುಣ ಅವರಲ್ಲಿ ಸಣ್ಣ ವಯಸ್ಸಿನಲ್ಲಿಯೇ ಇತ್ತು.

ಯಡಿಯೂರಪ್ಪ ನಾಯಕರಾಗಿ ಬೆಳೆಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರು ಈ ಹಿಂದೆ ಸರ್ಕಾರಿ ಬಸ್‌ನಲ್ಲಿಯೇ ಸಂಚರಿಸುತ್ತಿದ್ದರು. ಕೆಲವೊಮ್ಮೆ ನನ್ನ ಮನೆಗೆ ತಡರಾತ್ರಿ ಆಗಮಿಸಿ ಮುಂಜಾನೆ ನಾವು ಎದ್ದೇಳುವ ಮುನ್ನವೇ ಹೊರಟು ಹೋಗುತ್ತಿದ್ದರು. ಅವರ ಅವಿಶ್ರಾಂತ ದುಡಿಮೆಯೇ ಅವರನ್ನು ಉನ್ನತ ಸ್ಥಾನಕ್ಕೆ ಏರಿಸಿತು.
ನಿರೂಪಣೆ: ಸದೇಶ್ ಕಾರ್ಮಾಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net