ಸ್ನೇಹಕ್ಕೆ ಹೊಸ ಭಾಷ್ಯ ಬರೆದ ಗೆಳೆಯರು!

Friendsip
Published on

ಚನ್ನಪಟ್ಟಣ: ಅಕಾಲಿಕ ಮರಣ ಹೊಂದಿದ ಸ್ನೇಹಿತನ ವೃದ್ಧ ತಂದೆ-ತಾಯಿಗೆ ಹನ್ನೊಂದು ದಿನಗಳಲ್ಲಿ ಮನೆ ಕಟ್ಟಿಕೊಟ್ಟು ಹೊಸಮನೆಯಲ್ಲಿಯೇ ಗೆಳೆಯನ ವೈಕುಂಠ ಸಮಾರಾಧನೆ ಮಾಡಲುದ್ದೇಶಿಸುವ ಮೂಲಕ ತಾಲೂಕಿನ ಸಿಂಗರಾಜಿಪುರದ ಐದಾರು ಯುವಕರು ಸ್ನೇಹ ಎಂಬ ಪದಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

ಗ್ರಾಮದ ಸಣ್ಣಮ್ಮ ಮತ್ತು ಲಂಕಣ್ಣ ದಂಪತಿ ಪುತ್ರ ಶ್ರೀನಿವಾಸ್ (30) ಬೆಂಗಳೂರಿನಲ್ಲಿ ಚಿತ್ರಮಂದಿರವೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೇ 21ರಂದು ಹೃದಯಾಘಾತದಿಂದ ಮೃತಪಟ್ಟಿದ್ದ. ಇರಲು ಸ್ವತಃ ಸೂರಿಲ್ಲದೆ ಬೇರೆಯವರ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಲಂಕಣ್ಣ ದಂಪತಿ, ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕಂಗಾಲಾಗಿ ದ್ದರು. ಬೇರೆಯವರ ಜಾಗದಲ್ಲಿ ಗುಡಿಸಲು ನಿರ್ವಿುಸಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಮಗನೇ ಆಸರೆಯಾಗಿದ್ದ. ಇದ್ದ ಅಲ್ಪ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅಡಿಪಾಯ ನಿರ್ವಿುಸಿಕೊಂಡಿದ್ದ. ಅರ್ಧಕ್ಕೆ ನಿಂತ ಮನೆ, ಮುರುಕು ಗುಡಿಸಲಿನಲ್ಲಿ ಇರುವ ಸ್ನೇಹಿತನ ತಂದೆ ತಾಯಿಗೆ ಸೂರು ಕಲ್ಪಿಸಲು ಶ್ರೀನಿವಾಸನ ಸ್ನೇಹಿತರಾದ ರಾಘು, ಸಂತೋಷ್, ರವಿ, ನಾಗರಾಜ್ ಹಾಗೂ ನಂದೀಶ್ ಮುಂದಾದರು.

ತಮ್ಮ ಹಣದೊಂದಿಗೆ ದಾನಿಗಳ ಹಣವನ್ನು ಸೇರಿಸಿ ತಾವೇ ಕೆಲಸ ಮಾಡಿ ಅಂದದ ಮನೆ ನಿರ್ವಿುಸಿಕೊಟ್ಟಿದ್ದಾರೆ. ಸ್ಥಳೀಯ ಶಾಸಕ ಎಚ್.ಡಿ. ಕುಮಾರಸ್ವಾಮಿ ಸೇರಿ ತಾಲೂಕಿನ ಹಲವರು ಮನೆ ನಿರ್ವಣಕ್ಕೆ ನೆರವಾಗಿದ್ದಾರೆ. ಆ ಮನೆಯಲ್ಲೇ ಮಂಗಳವಾರ (ಜೂ.2) ಶ್ರೀನಿವಾಸನ 11ನೇ ದಿನದ ಕಾರ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net