

ರಾಣೆಬೆನ್ನೂರ: 24 ವರ್ಷದ ಹಿಂದೆಯೆ ಆ ಸ್ನೇಹಿತೆಯರು ಪ್ರೇಮ ಕಹಾನಿಗೆ ಎಳ್ಳು ನೀಡು ಬಿಟ್ಟಿದ್ದರು. ಆದರೆ, ಆ ಪಾಗಲ್ ಪ್ರೇಮಿ ಸರ್ಕಾರಿ ಅಧಿಕಾರಿಯಾಗಿರುವ ಸ್ನೇಹಿತೆಯನ್ನು ಈಗ ಕಾಡಲಾರಂಭಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಚಿತ್ರದುರ್ಗ ಜಿಲ್ಲೆ ಹೊಳಲಕೆರೆ ತಾಲೂಕಿನ ದೊಗ್ಗನಾಳ ಗ್ರಾಮದ ಸತೀಶ ಬೆಂಕಿಕೆರೆ ಪೊಲೀಸರ ಅತಿಥಿಯಾದ ಆರೋಪಿ.
ಈತ ಕಾಲೇಜ್‌ನ ದಿನದಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ನನ್ನೊಂದಿಗೆ ಮದುವೆ ಮಾಡಿಸಿಕೊಡು ಎಂದರೂ ಮಾಡಿಸಲಿಲ್ಲ ಎನ್ನುವ ಕಾರಣಕ್ಕೆ 24 ವರ್ಷದ ಬಳಿಕ ನಗರದಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸ್ನೇಹಿತೆಗೆ ಅಶ್ಲೀಲ ಮೇಸೆಜ್ ಮಾಡಿ ನಿನ್ನ ಹಾಗೂ ನಿನ್ನ ಕುಟುಂಬದವರನ್ನು ಕೊಲೆ ಮಾಡುವೆ ಎಂದು ಬೇದರಿಕೆ ಹಾಕಿದ್ದಾನೆ.
ಈತನ ವಿರುದ್ಧ ನೊಂದ ಸರ್ಕಾರಿ ಮಹಿಳಾ ಅಧಿಕಾರಿಯು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಏನಿದು ಪ್ರಕರಣ…?
ಸತೀಶ 2000ನೇ ಸಾಲಿನಲ್ಲಿ ಮಂಡ್ಯದ ಕಾಲೇಜ್‌ವೊಂದರಲ್ಲಿ ಬಿಎಸ್‌ಸಿ ಅಗ್ರೀ ಓದುತ್ತಿದ್ದ. ಆ ಸಮಯದಲ್ಲಿ ಪೂಜಾ (ಹೆಸರು ಬದಲಾಯಿಸಲಾಗಿದೆ) ಎಂಬುವರನ್ನು ಪ್ರೀತಿಸುತ್ತಿದ್ದ. ಆಕೆ ಈತನ ಪ್ರೀತಿ ನಿರಾಕರಿಸಿದ್ದಳು. ಆದರೆ, ಸತೀಶ ‘ಹೇಗಾದರೂ ಮಾಡಿ ಪೂಜಾಳನ್ನು ನನ್ನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಮಾಡು’ ಎಂದು ಪೂಜಾಳ ಕ್ಲಾಸ್‌ಮೆಂಟ್ ಆಗಿದ್ದ ಮಹಿಳಾ ಅಧಿಕಾರಿಗೆ ಒತ್ತಾಯ ಮಾಡಿದ್ದ. ಆದರೆ, ಆತನ ಒತ್ತಾಯಕ್ಕೆ ತಲೆ ಕೆಡಿಸಿಕೊಳ್ಳದ ಸ್ನೇಹಿತೆಯರು ಕಾಲೇಜ್ ಮುಗಿದ ಮೇಲೆ ಮದುವೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
24 ವರ್ಷದ ಬಳಿಕ ಕಿರಿಕ್…
ಆಗ ವಿದ್ಯಾರ್ಥಿನಿಯಾಗಿದ್ದ ನೊಂದ ಮಹಿಳೆ ಇದೀಗ ನಗರದಲ್ಲಿ ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ತಿಳಿದ ಸತೀಶ ‘ನೀನು ಪೂಜಾ ನನ್ನೊಂದಿಗೆ ವಿವಾಹ ಆಗದಂತೆ ಮಾಡಿದ್ದೀಯಾ. ನಿನ್ನನ್ನು ಹಾಗೂ ನಿನ್ನ ಕುಟುಂಬದವರನ್ನು ಕೊಲ್ಲದೆ ಬಿಡುವುದಿಲ್ಲ’ ಎಂದು ಅಶ್ಲೀಲ ಮೇಸೆಜ್ ಮಾಡುವುದು ಹಾಗೂ ಎಲ್ಲರನ್ನು ಕೊಂದು ಹಾಕುತ್ತೇನೆ ಎಂದು ಫೆಸ್‌ಬುಕ್‌ನಲ್ಲಿರುವ ಮಹಿಳೆಯ ಕುಟುಂಬದ ಫೋಟೊ ಮೇಲೆಗೆ ವೃತ್ತಾಕಾರದ ಮಾರ್ಕ್‌ಗಳನ್ನು ಹಾಕಿ ಅವರ ವಾಟ್ಸ್‌ಅಪ್‌ಗೆ ಕಳುಹಿಸುತ್ತಿದ್ದಾನೆ.
ಮಹಿಳಾ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಅಧಿಕಾರಿಯ ಚಲನವಲನ ಹಾಗೂ ಪ್ರವಾಸದ ಮಾಹಿತಿ ನೀಡಬೇಕು ಎಂದು ಕೇಳುತ್ತಿದ್ದಾನೆ. ಅಲ್ಲದೆ ಕಚೇರಿಗೆ ಬಂದು ಅವರ ವಾಹನ ತಡೆದು ‘ನಾನು ಕೇಳಿದಷ್ಟು ಹಣ ಕೊಡು. ಇಲ್ಲವಾದರೆ ನಿಮ್ಮ ಮಾನ ಹರಾಜು ಹಾಕುತ್ತೇನೆ’ ಎಂದು ಮನಬಂದಂತೆ ಬೈದು ಜಾತಿ ನಿಂದನೆ ಸಹ ಮಾಡಿದ್ದಾನೆ ಎನ್ನಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.