ಪುಡಿ ರೌಡಿಗಳಿಂದ ಸ್ನೇಹಿತರ ಮೇಲೆ ಹಲ್ಲೆ

Crime Logo
Published on

ಬೆಂಗಳೂರು: ಕುಡಿದ ಮತ್ತಿನಲ್ಲಿ ಪುಡಿ ರೌಡಿಗಳ ಗುಂಪೊಂದು ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ಮಾಡಿದಲ್ಲದೇ ಒಬ್ಬನನ್ನು ಕಾರಿನಲ್ಲಿ ಅಪಹರಿಸಿ ಮಾರಕಾಸಗಳಿಂದ ಹಲ್ಲೆ ನಡೆಸಿರುವ ಪ್ರಕರಣ ಕಲಾಸಿಪಾಳ್ಯ ಮುಖ್ಯರಸ್ತೆಯ ಶಮಂತ್ ಬಾರ್‌ನಲ್ಲಿ ನಡೆದಿದೆ.
ಮೋಹನ್ ಕುಮಾರ್ ಹಾಗೂ ಸತೀಶ್ ಹಲ್ಲೆಗೊಳಗಾದವರು.


ಚಂದನ್, ಗಿರಿ, ದೀಪು, ಮಂಜ ಮತ್ತಿತರ ಆರೋಪಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಮೋಹನ್‌ಕುಮಾರ್ ನೀಡಿದ ವಿರುದ್ಧ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಏನಿದು ಪ್ರಕರಣ?
ಸೆ.೩೦ರ ಮಧ್ಯರಾತ್ರಿ ೧ ಗಂಟೆಯ ಸಮಯದಲ್ಲಿ ಶಮಂತ್ ಬಾರ್‌ಗೆ ಬಂದಿದ್ದ ಬಂದಿದ್ದ ರೌಡಿ ಸಹಚರರು ಮದ್ಯ ಸೇವಿಸುತ್ತಾ ಕುಳಿತ್ತಿದ್ದರು. ಈ ವೇಳೆ ಮೋಹನ್‌ಕುಮಾರ್, ಸತೀಶ್ ಸೇರಿ ಇತರರು ಅದೇ ಬಾರಿಗೆ ಬಂದಿದ್ದರು. ಆರೋಪಿಗಳಾದ ಚಂದನ್, ಗಿರಿ, ದೀಪು, ಮಂಜ ಸೇರಿ ಏಳೆಂಟು ಮಂದಿ ಇದ್ದ ಗುಂಪು ಕುಡಿಯುತ್ತಾ ಗಲಾಟೆ ಮಾಡುತ್ತಾ ಕುಳಿತ್ತಿದ್ದರು. ಆಗ ಮೋಹನ್ ಕುಮಾರ್ ಏಕೆ ಗಲಾಟೆ ಮಾಡುತ್ತಿದ್ದೀರಾ? ಎಂದು ಕೇಳಿದಕ್ಕೆ ಅವರುಗಳು ನಮ್ಮ ದುಡ್ಡಲ್ಲಿ ನಾವು ಕುಡಿಯುತ್ತಿದ್ದೇವೆ. ಇದನ್ನು ಕೇಳೋಕೆ ನೀವು ಯಾರು ಎಂದಿದ್ದರು. ಇದರಿಂದ ಮೋಹನ್‌ಕುಮಾರ್ ಸುಮ್ಮನಾಗಿದ್ದರು. ಸ್ವಲ್ಪ ಸಮಯದ ನಂತರ ಮತ್ತೆ ಜೋರಾಗಿ ಕೂಗುತ್ತಾ ಗಲಾಟೆ ಮಾಡಿದ್ದರಿಂದ ಸಿಟ್ಟಿಗೆದ್ದ ಮೋಹನ್‌ಕುಮಾರ್ ನಿಮ್ಮಿಂದ ಪಕ್ಕದಲ್ಲಿದ್ದವರಿಗೆ ತೊಂದರೆಯಾಗುತ್ತಿದೆ ಸ್ವಲ್ಪ ಗಲಾಟೆಯನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ. ಈ ವೇಳೆ ಈ ನನ್ ಮಕ್ಕಳದು ಅತಿಯಾಯಿತು ಇವರನ್ನು ಮುಗಿಸಿ ಬಿಟ್ಟರೆ ನಮ್ಮನ್ನು ಕೇಳಲು ಯಾರು ಇರುವುದಿಲ್ಲ ಎಂದು ಮಾತನಾಡಿಕೊಂಡು ಕಾರಿನಲ್ಲಿದ್ದ ಲಾಂಚ್ ಮಚ್ಚುಗಳನ್ನು ಎತ್ತಿಕೊಂಡು ಬಂದ ಗುಂಪು ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ಬಾರ್‌ನ ಕ್ಯಾಶಿಯರ್ ಬಂದು ಬಾರ್‌ನಲ್ಲಿದ್ದ ಎಲ್ಲರನ್ನು ಹೊರಗಡೆ ಕಳುಹಿಸಿದ್ದಾರೆ. ಹೊರ ಹೋಗುತ್ತಿದಂತೆ ಮೋಹನ್ ಕುಮಾರ್‌ನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಮತ್ತೆ ಎಲ್ಲರೂ ಸೇರಿ ಬೆನ್ನಿಗೆ ಹಾಗೂ ತಲೆಯ ಭಾಗಕ್ಕೆ ಹೊಡೆದಿದ್ದು, ಈ ವೇಳೆ ಮೋಹನ್ ಕುಮಾರ್ ಕಾರಿನ ಬಾಗಿಲನ್ನು ಒದ್ದು ಹೊರಗೆ ತಪ್ಪಿಸಿಕೊಂಡು ಬಂದಿದ್ದು, ಆಗ ಅವರೆಲ್ಲರೂ ಅಲ್ಲಿಂದ ಹೊರಟು ಹೋಗಿದ್ದಾರೆ. ಸ್ನೇಹಿತ ನಾಗೇಶ್‌ನನ್ನು ಕರೆಸಿಕೊಂಡ ಮೋಹನ್ ಕುಮಾರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಹವಾ ಸೃಷ್ಟಿಸಲು ಹಲ್ಲೆ!:
ಚಂದನ್ ಅಲಿಯಾಸ್ ವೀರು ಪಶ್ಚಿಮ ವಿಭಾಗದ ರೌಡಿಶೀಟರ್ ಆಗಿದ್ದು, ಇತ್ತೀಚೆಗೆ ಈತ ಜೈಲಿನಿಂದ ಹೊರ ಬಂದಿದ್ದ. ಈತ ಬಿಡುಗಡೆ ಹಿನ್ನೆಲೆಯಲ್ಲಿ ಆತನ ಸಹಚರರು ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಸ್ನೇಹಿತರ ಮೇಲೆ ಮಾರಕಾಸಗಳಿಂದ ಹಲ್ಲೆ ಮಾಡಿದ್ದಾರೆ. ಏರಿಯಾದಲ್ಲಿ ಹವಾ ಸೃಷ್ಟಿಸಲು ವಿನಾಕಾರಣ ರೌಡಿಶೀಟರ್ ವೀರು ಸಹಚರರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net