ಪತ್ರಕರ್ತರ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ

cricket
Published on

ಮಡಿಕೇರಿ: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗಾಗಿ ನಗರದ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಬೆಸ್ಟ್ ಆಫ್ ತ್ರೀ ಸೌಹಾರ್ದ ಕ್ರಿಕೆಟ್ ಪಂದ್ಯಾಟವನ್ನು ಭಾನುವಾರ ಆಯೋಜಿಸಲಾಗಿತ್ತು.

೮ ಓವರ್‌ಗಳ ಮೂರು ಪಂದ್ಯಾಟದಲ್ಲಿ ೨ ಪಂದ್ಯ ಗೆದ್ದು ಮಂಜು ಸುವರ್ಣ ನಾಯಕತ್ವದ ಪವರ್ ಹಿಟ್ಟರ್ಸ್‌ ವಿಜಯ ಸಾಧಿಸಿತು. ಆದರ್ಶ್ ಅದ್ಕಲೇಗಾರ್ ನಾಯಕತ್ವದ ಟೀಂ ಫೈಟರ್ಸ್‌ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಪಂದ್ಯಾಟವನ್ನು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮತ್ತು ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸದಾ ವೃತ್ತಿಯ ಜಂಜಾಟದಲ್ಲಿದ್ದು, ಅವರ ಮನೋಲ್ಲಾಸಕ್ಕೆ ಕ್ರೀಡಾಕೂಟಗಳು ಅವಶ್ಯಕ. ಇದರಿಂದ ದೈಹಿಕ ಚಟುವಟಿಕೆ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ವಿಶಾಲ್ ಮಾರ್ಟ್ ವ್ಯವಸ್ಥಾಪಕ ಕೆ.ಕೆ.ಗಿರೀಶ್ ಈ ಸಂದರ್ಭ ಹಾಜರಿದ್ದರು. ಅ ನಂತರ ಪತ್ರಿಕಾ ಭವನದಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಇ.ಎನ್.ಟಿ ತಜ್ಞ ಡಾ.ಮೋಹನ್ ಅಪ್ಪಾಜಿ, ಪ್ರಸ್ತುತ ಕಾಲಘಟ್ಟದಲ್ಲಿ ವೃತ್ತಿಯ ಜಂಜಾಟದಿಂದ ಆರೋಗ್ಯದ ಬಗ್ಗೆ ಜನರು ಕಾಳಜಿ ತೋರುತ್ತಿಲ್ಲ. ಬದಲಾಗುತ್ತಿರುವ ಜೀವನ ಹಾಗೂ ಆಹಾರ ಶೈಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆರೋಗ್ಯ ಕಾಪಾಡಿಕೊಳ್ಳುವುದರಿಂದ ದೈಹಿಕ ಪ್ರಯೋಜನ ಮಾತ್ರವಲ್ಲದೆ ಮಾನಸಿಕವಾಗಿಯೂ ಸದೃಢವಾಗಿರಬಹುದು. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತರ ಒತ್ತಡ ದೂರ ಮಾಡಲು ಈ ರೀತಿಯ ಆಟೋಟಗಳು ಅಗತ್ಯ ಎಂದು ನುಡಿದರು.

ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಪತ್ರಕರ್ತರಿಗೆ ದೈಹಿಕ ಸಾಮರ್ಥ್ಯವು ಅನಿವಾರ್ಯವಾಗಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಬಗ್ಗೆ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.

ಉದ್ಯಮಿ ಅಜ್ಜಮಕ್ಕಡ ವಿನುಕುಶಾಲಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ, ಕ್ರಿಕೆಟ್ ಟೂರ್ನಿ ಸಂಚಾಲಕ ನವೀನ್ ಸುವರ್ಣ ಹಾಜರಿದ್ದರು. ದಿವಾಕರ್ ಜಾಕಿ ಸ್ವಾಗತಿಸಿ, ಹೆಚ್.ಜೆ.ರಾಕೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net