ಸೌಹಾರ್ದ ಸಹಕಾರಿಗೆ ರಜತ ಸಂಭ್ರಮ

26mnv02
ನಂಜನಗೌಡ
Published on

ಮಾನ್ವಿ: ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೌಹಾರ್ದ ಸಹಕಾರಿ ರಜತ ಮಹೋತ್ಸವ ವರ್ಷವನ್ನಾಗಿ ಆಚರಿಸಲು ನಿರ್ಣಯಿಸಲಾಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷ ನಂಜನಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಜತ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೌಹಾರ್ದ ಸಹಕಾರಿ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಪ್ರವಾಸ, ಸಮಸ್ಯೆಗಳ ಅಧ್ಯಯನ, ಸಹಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು. ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಿಸಿದವರ ಜತೆ ಚರ್ಚಿಸುವುದು ನಿರಂತರ ಪ್ರಕ್ರಿಯೆಯಾಗಿದೆ ಎಂದರು.

ಪ್ರಸ್ತುತ ಕಕ ಭಾಗದ ಏಳು ಜಿಲ್ಲೆಗಳಲ್ಲಿ 1647 ಸಹಕಾರಿಗಳಿದ್ದು, ಅಂದಾಜು 12 ಲಕ್ಷ ಸದಸ್ಯರು, 8 ಸಾವಿರ ಜನ ನೌಕರರಿದ್ದಾರೆ. ದುಡಿಯುವ ಬಂಡವಾಳ 8305.22 ಕೋಟಿ ರೂ., ಷೇರು 328.76 ಕೋಟಿ ರೂ., ಠೇವಣಿ 7004.92 ಕೋಟಿ ರೂ., ನೀಡಿದ ಸಾಲ 5854.42 ಕೋಟಿ ರೂ., ನಿಧಿಗಳು 779.81 ಕೋಟಿ ರೂ., ಲಾಭ 137.92 ಕೋಟಿ ರೂ. ಹೊಂದಿರುತ್ತದೆ ಎಂದು ತಿಳಿಸಿದರು.

ರಾಷ್ಟ್ರದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಪ್ರಪ್ರಥಮವಾಗಿ ಇ-ಸ್ಟಾಂಪಿಂಗ್ ವ್ಯವಹಾರ ಮಾಡುವ ಹೆಗ್ಗಳಿಕೆ ಇದೆ. ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಂಯುಕ್ತ ಸಹಕಾರಿಯು ಇ-ಸ್ಟಾಂಪಿಂಗ್ ವ್ಯವಹಾರ ನಡೆಸಲು ಸೌಹಾರ್ದ ಸಹಕಾರಿಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಸಾರ್ವಜನಿಕರ ಸೇವೆ ಮಾಡುವುದರೊಂದಿಗೆ ಪ್ರತಿ ದಿನ ಎರಡು ಕೋಟಿ ರೂ.ಗೂ ಹೆಚ್ಚು ರಾಜಸ್ವವನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ನಂಜನಗೌಡ ಮಾಹಿತಿ ನೀಡಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸದಸ್ಯ ಆರ್.ತಿಮ್ಮಯ್ಯ ಶೆಟ್ಟಿ, ಕಲಬುರಗಿ ವಿಭಾಗದ ಅಧ್ಯಕ್ಷ ಆರ್.ಸೂರ್ಯಕಾಂತ, ಜಿಲ್ಲಾ ಅಧ್ಯಕ್ಷ ದೊಡ್ಡ ಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net