ಶಾಂತಿ ಸಾರುವ ಹಬ್ಬ ಕ್ರಿಸ್ಮಸ್​ : ಬಿಷಪ್​

udp-16-bishop
Published on

ಉಡುಪಿ: ಕ್ರಿಸ್ತ ಜಯಂತಿ ಹಬ್ಬವು ಶಾಂತಿಯನ್ನು ಸಾರುತ್ತದೆ. ಶಾಂತಿಯ ಸಾಧನವಾಗಲು, ಶಾಂತಿಯ ದೂತರಾಗಲು ನಮ್ಮನ್ನು ಪ್ರೇರೇಪಿಸುತ್ತದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನುಮನಗಳಲ್ಲಿ ಪ್ರಜ್ವಲಿಸಬೇಕಾದರೆ ಸೇವಾಮನೋಭಾವದಿಂದ ನಿಸ್ವಾರ್ಥಿಗಳಾಗಬೇಕು ಎಂದು ಕೆಸ್ತ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ.ಜೆರಾಲ್ಡ್​ ಐಸಾಕ್​ ಲೋಬೊ ಹೇಳಿದರು.

ಶನಿವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕಥೊಲಿಕ್​ ಸಭಾ ಉಡುಪಿ ಪ್ರದೇಶ ವತಿಯಿಂದ ಆಯೋಜಿಸಿದ್ದ ಸೌಹಾರ್ದ ಕ್ರಿಸ್ಮಸ್​ ಆಚರಣೆ ಉದ್ಘಾಟಿಸಿ ಮಾತನಾಡಿದರು.

ದೇವರ ಪ್ರೀತಿ ಪಾತ್ರರಾಗಬೇಕಾದರೆ ದೀನತಾಭಾವ ಅತ್ಯಗತ್ಯ. ತನಗಾಗಿ ಏನನ್ನೂ ಹಿಡಿದಿಟ್ಟುಕೊಳ್ಳದೆ ಎಲ್ಲವನ್ನೂ ಧರೆಗೆ ಧಾರೆ ಎರೆಯುವುದೇ ಸ್ವಾರ್ಥ ರಹಿತ ಪ್ರೀತಿ. ದೇವರ ಈ ನಿಸ್ವಾರ್ಥ ಪ್ರೀತಿಯ ಕಥೆಯನ್ನು ಸಾರಿ ಹೇಳುವ ಮಹಾ ಸಂದರ್ಭವೇ ಕ್ರಿಸ್ಮಸ್​ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯ ಅಬ್ದುಲ್​ ಅಝಿಜ್​ ಉದ್ಯಾವರ ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್​ ವಾದ) ಸುಂದರ ಮಾಸ್ತರ್​ ಹಾಗೂ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಶುಭ ಹಾರೈಸಿದರು.

ಗೌರವ ಸನ್ಮಾನ
ಸಹಕಾರ ರತ್ನ ಪ್ರಶಸ್ತಿ ಪಡೆದ ಎಂಸಿಸಿ ಬ್ಯಾಂಕ್​ ಅಧ್ಯಕ್ಷ ಅನಿಲ್​ ಲೋಬೊ ಫೆಮಾರ್ಯಿ, ಪತ್ರಕರ್ತರಾದ ಶಶಿಧರ ಮಾಸ್ತಿಬೈಲು, ಮಹಮ್ಮದ್​ ಷರೀಫ್​, ನಝೀರ್​ ಪೊಲ್ಯ, ಶ್ರೀಕಾಂತ ಹೆಮ್ಮಾಡಿ, ಜಸ್ಟೀನ್​ ಎರೋಲ್​ ಡಿ'ಸಿಲ್ವಾ, ಸಾಧಕರಾದ ಹಾಜಿ ಅಬ್ದುಲ್ಲಾ ಪರ್ಕಳ, ಆಯಿಷಾ ಭಾನು, ವಿಶು ಶೆಟ್ಟಿ ಅಂಬಲಪಾಡಿ, ಈಶ್ವರ್​ ಮಲ್ಪೆ, ಮೇರಿ ಶ್ರೇಷ್ಠ, ಕ್ಲಾರೆನ್ಸ್​ ಡಿಸೋಜಾ, ಹೆನ್ರಿ ಸಾಂತುಮಾಯೆರ್​, ಅರುಣ್​ ಫೆರ್ನಾಂಡಿಸ್​, ವಿಲ್ಸನ್​ ರೊಡ್ರಿಗಸ್​, ಮೇರಿ ಮಸ್ಕರೇನ್ಹಸ್​, ಜೋನ್​ ಸಿಕ್ವೇರಾ ಇವರನ್ನು ಸನ್ಮಾನಿಸಲಾಯಿತು.

ಕಥೊಲಿಕ್​ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಸಂತೋಷ್​ ಕರ್ನೆಲಿಯೋ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿಸೋಜಾ, ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್​ ಡಿಆಲ್ಮೇಡಾ, ಮಾಜಿ ಅಧ್ಯಕ್ಷರಾದ ವಲೇರಿಯನ್​ ಫೆರ್ನಾಂಡಿಸ್​, ವಾಲ್ಟರ್​ ಸಿರಿಲ್​ ಪಿಂಟೊ, ಆಲ್ಫೋನ್ಸ್​ ಡಿಕೋಸ್ತಾ, ಮಾಧ್ಯಮ ಸಮಿತಿ ಸಂಚಾಲಕ ಮೈಕಲ್​ ರೊಡ್ರಿಗಸ್​ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಮೆಲ್ವಿನ್​ ಅರಾನ್ಹಾ ಸ್ವಾಗತಿಸಿ, ಕಥೊಲಿಕ್​ ಸಭಾ ಉಡುಪಿ ಪ್ರದೇಶ ಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ ವಂದಿಸಿದರು. ಮಾಜಿ ಅಧ್ಯಕ್ಷ ಡಾ.ಜೆರಾಲ್ಡ್​ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net