

ಉಡುಪಿ: ಪರಸ್ಪರ ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಸ್ವಸ್ಥ ಸಮಾಜ ನಿಮಾರ್ಣ ಸಾಧ್ಯ ಎಂದು ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಹೇಳಿದರು.
ಗುರುವಾರ ಶೋಕಮಾತಾ ಚರ್ಚ್ ಸಭಾಂಗಣದಲ್ಲಿ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯ ವತಿಯಿಂದ ಮಾಧ್ಯಮ ಮಿತ್ರರಿದೊಂದಿಗೆ ಸೌಹಾರ್ದ ಕ್ರಿಸ್ಮಸ್ ಆಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧೀಶಿಲ ಭಾರತದಲ್ಲಿ ವೈದ್ಯಕಿಯ, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೌಶಲ್ಯಪರರ ಕೊರತೆ ಕಾಡುತ್ತಿದೆ. ಈ ಸಮಸ್ಯೆ ನಿವಾರಣೆಗೆ ಎಲ್ಲರೂ ಗಮನಹರಿಸಬೇಕು. ದೇಶದಲ್ಲಿ 15ರಿಂದ 20 ಕೋಟಿ ಮಂದಿ ಬೊಜ್ಜುತನ ಸಮಸ್ಯೆಯಿಂದ ಬಳಲುತ್ತಿದ್ದು, ಹಿತಮಿತ ಆಹಾರ, ವ್ಯಾಯಾಮ ಕ್ರಮ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಿಎಸ್ ಐ ಕರ್ನಾಟಕ ದಕ್ಷಿಣ ಪ್ರಾಂತ ಧಮಾರ್ಧ್ಯಕ್ಷ ಅತಿ ಹೇಮಚಂದ್ರ ಕುಮಾರ್ ಮಾತನಾಡಿ, ಸಮುದಾಯದ ಮಧ್ಯೆ ಮನುಷ್ಯತ್ವದ ಕಾರ್ಯವುಳ್ಳ ವ್ಯಕ್ತಿಯಾಗಿ ಯೇಸು ಸ್ವಾಮಿ ಬದುಕುವ ಮೂಲಕ ಮಾದರಿಯಾಗಿದ್ದಾರೆ. ಕ್ರಿಸ್ಮಸ್ ಹಬ್ಬ ಶಾಂತಿ ಸೌಹಾರ್ದತೆಯ ಜೀವನ ನಡೆಸಲು ಸಹಕಾರಿಯಾಗಲಿ ಎಂದು ಹೇಳಿದರು.
ಉಡುಪಿ ಜಿಲ್ಲಾ ವಾರ್ತಾಧಿಕಾರಿ ಬಿ ಮಂಜುನಾಥ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಶುಭ ಹಾರೈಸಿದರು. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಚಾರ್ಲ್ಸ್ ಮಿನೇಜಸ್, ಉಡುಪಿ ಪತ್ರಿಕಾ ಭವನದ ಸಹ ಸಂಚಾಲಕ ಅಂಕಿತ್ ಶೆಟ್ಟಿ, ಡಾ.ರೋಶನ್ ಡಿಸೋಜಾ, ಆಲ್ವಿನ್ ಉಪಸ್ಥಿತರಿದ್ದರು. ಉಡುಪಿ ಧಮಾರ್ಧ್ಯಕ ಡಾ.ಜೆರಾಲ್ಡ್ ಐಸಾಕ್ ಲೋಬೊ ಸ್ವಾಗತಿಸಿ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ವಂದಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.