ಪಾರ್ಟಿ ಮಾಡುವಾಗ ಸ್ನೇಹಿತರಿಂದಲೇ ಕೊಲೆಯಾದ ಕೆಪಿಟಿಸಿಎಲ್ ನೌಕರ

Shoot Murder
Published on

ಹಾಸನ: ತಾಲೂಕಿನ ಹೂವಿನಹಳ್ಳಿ ಕಾವಲು ಸಮೀಪ ಶುಕ್ರವಾರ ರಾತ್ರಿ ಕೆಪಿಟಿಸಿಎಲ್‌ನ ಕಿರಿಯ ಸಹಾಯಕನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಅರೆಕಲ್ ಹೊಸಹಳ್ಳಿ ಗ್ರಾಮದ ಸಂತೋಷ್ (35) ಮೃತರು. ಸ್ನೇಹಿತರೊಂದಿಗೆ ಶುಕ್ರವಾರ ಮಧ್ಯಾಹ್ನ ಹೂವಿನಹಳ್ಳಿಕಾವಲಿಗೆ ತೆರಳಿದ್ದ ಸಂತೋಷ್ ಶವವಾಗಿ ಸಿಕ್ಕಿದ್ದಾರೆ. ಪಾರ್ಟಿ ಮಾಡುತ್ತಿದ್ದ ಜಮೀನಿನಲ್ಲಿ ಊಟ, ಮದ್ಯದ ಬಾಟಲಿ ಬಿದ್ದಿದ್ದು ಜತೆಗಿದ್ದವರೇ ಗುಂಡು ಹಾರಿಸಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಶನಿವಾರ ಬೆಳಗ್ಗೆ ಜಮೀನಿಗೆ ತೆರಳುತ್ತಿದ್ದ ಸಾರ್ವಜನಿಕರು ಮೃತದೇಹ ಕಂಡು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಪರಿಶೀಲನೆ ನಡೆಸಿದರು.

ಕೆಪಿಟಿಸಿಎಲ್ ನೌಕರರಾಗಿದ್ದ ರಂಗೇಗೌಡ ಸೇವೆಯಲ್ಲಿದ್ದಾಗಲೇ ವಿಧಿವಶರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಸಂತೋಷ್‌ಗೆ ಕೆಲಸ ಸಿಕ್ಕಿತ್ತು. ಆದರೆ ವಿಪರೀತ ಮದ್ಯವ್ಯಸನಿಯಾಗಿದ್ದ ಸಂತೋಷ್ ಕಳೆದ 11 ತಿಂಗಳಿಂದ ಕೆಲಸಕ್ಕೆ ಹಾಜರಾಗಿರಲಿಲ್ಲ. ಇಸ್ಪೀಟ್, ಡ್ರಗ್ಸ್, ಮದ್ಯದ ದಾಸರಾಗಿದ್ದರು ಎನ್ನಲಾಗಿದೆ. ಕುಡುಕ ಸ್ನೇಹಿತರೊಟ್ಟಿಗೆ ಯಾವಾಗಲೂ ಇರುತ್ತಿದ್ದರು. ಶುಕ್ರವಾರ ಯಾವುದೋ ವಿಚಾರಕ್ಕೆ ಗಲಾಟೆ ನಡೆದು ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net