

ಶಿವಮೊಗ್ಗ: ಕುಡಿಯಲು ಹಣ ನೀಡದ್ದಕ್ಕೆ ಸ್ನೇಹಿತನ ತಲೆ ಮೇಲೆ ಕತ್ತು ಎತ್ತಿ ಹಾಕಿ ಕೊಲೆ ಮಾಡಿದ್ದ ಇಬ್ಬರಿಗೆ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 10,000 ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದರೆ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದೆ.
ಗುತ್ಯಪ್ಪ ಕಾಲನಿಯ ಜಯಣ್ಣ (42) ಮತ್ತು ಅಶೋಕ ರಸ್ತೆಯ ವಾಸು (42) ಜೀವಾವಧಿ ಶಿಕ್ಷೆಗೆ ಒಳಗಾದವರು. ಇಬ್ಬರು 2017ರ ಜ.23ರಂದು ಬಾಪೂಜಿನಗರದ ರಾಜು(36) ಎಂಬುವರನ್ನು ಕೊಲೆ ಮಾಡಿದ್ದರು.
ರಾಜು, ಜಯಣ್ಣ ಮತ್ತು ವಾಸು ಪರಿಚಯಸ್ಥರಾಗಿದ್ದು ರಾಜು ಬಳಿ ಕುಡಿಯುವ ಹಣ ನೀಡುವಂತೆ ಜಯಣ್ಣ ಮತ್ತು ವಾಸು ಕೇಳಿದ್ದರು. ಆದರೆ ಹಣ ನೀಡಲು ರಾಜು ನಿರಾಕರಿಸಿದ್ದರು. ಈ ವೇಳೆ ಜಗಳವಾಗಿತ್ತು. ಅದೇ ದ್ವೇಷದ ಹಿನ್ನಲೆಯಲ್ಲಿ ಅದೇ ದಿನ ಸಾಗರ ರಸ್ತೆಯ ಹೆವನ್ ಇನ್ ಬಾರ್ ಎದುರಿನ ವಾಸದ ಶೆಡ್‌ನಲ್ಲಿ ರಾತ್ರಿ ಮಲಗಿದ್ದ ರಾಜು ಮೇಲೆ ಇಬ್ಬರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು.
ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಶಿವಮೊಗ್ಗ ಗ್ರಾಮಾಂತರ ವೃತ್ತ ನಿರೀಕ್ಷಕ ಮಹಾಂತೇಶ್ ಬಿ ಹೋಳಿ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎಸ್.ಮಾನು ಅವರು ಜಯ್ಯಣ್ಣ ಮತ್ತು ವಾಸು ಅವರ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶುಕ್ರವಾರ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದರು. ಸರ್ಕಾರಿ ಅಭಿಯೋಜಕಿ ಮಮತಾ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.