

ಭಾಲ್ಕಿ: ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೂಲಕ ದೊಡ್ಡ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಗಾದಗೆ ಹೇಳಿದರು.
ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜಿ (ಬಿಕೆಐಟಿ)ನಲ್ಲಿ ವಿಜಯೋತ್ಸವ-೨೦೨೪ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಹೊಸಬರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಹಿರೇಮಠ ಸಂಸ್ಥಾನದ ಲಿಂ. ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಆಶೀರ್ವಾದದಿಂದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಈ ಭಾಗದ ಗ್ರಾಮೀಣ ಬಡ ಮಕ್ಕಳ ಉದ್ಧಾರಕ್ಕಾಗಿ ೧೯೮೨ರಲ್ಲಿ ಗ್ರಾಮೀಣ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದ್ದಾರೆ. ಬೆಂಗಳೂರು ಸೇರಿ ಪ್ರತಿಷ್ಠಿತ ಎಲ್ಲ ಕಾಲೇಜುಗಳಲ್ಲಿ ಸಿಗುವ ಸೌಲಭ್ಯಗಳು ಇಲ್ಲೂ ಇವೆ. ಹೀಗಾಗಿ ಬಿಕೆಐಟಿ ಎಂದು ಮರುನಾಮಕರಣ ಮಾಡಿ ಹಳ್ಳಿ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾಲೇಜು ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವದ ಎಲ್ಲ ರಾಜ ಮಹಾರಾಜರು, ವಿದ್ವಾಂಸರು ಗುರುಕುಲ ಎಂಬ ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿಯೇ ಬೆಳೆದಿದ್ದಾರೆ. ಆದರೆ ಇಂದು ನಮ್ಮ ಯುವಕರು ಬೆಂಗಳೂರು ಸೇರಿ ನಗರ ಪ್ರದೇಶಗಳಲ್ಲಿ ಓದಲು ಇಚ್ಛಿಸುತ್ತಿರುವುದು ವಿಪರ್ಯಾಸ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಪ್ರೊ.ಅಂಕುಶ ಢೋಲೆ ಮಾತನಾಡಿ, ವಿದ್ಯಾರ್ಥಿಗಳು ರಟ್ಟು ಹಿಡಿದು ಪರೀಕ್ಷೆಗಾಗಿ ಓದದೆ ವಿದ್ಯಾಭ್ಯಾಸ ಮಾಡಿದ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ಡಾ.ಉದಯಕುಮಾರ ಕಲ್ಯಾಣ ಪ್ರಾಸ್ತಾವಿಕ ಮಾತನಾಡಿದರು. ಡಾ.ಅಶೋಕ ಕೋಟಿ, ಡಾ.ಬಿ. ಸೂರ್ಯಕಾಂತ, ಡಾ.ಸಂಗಮೇಶ ಕಲ್ಯಾಣೆ, ಡಾ.ಪ್ರಶಾಂತ ಸಂಗೋಳಗಿ, ಡಾ.ಮಲ್ಲಿಕಾರ್ಜುನ ದೇವಣಿ, ಡಾ.ಶಿವಕುಮಾರ ಅಣದೂರೆ, ಡಾ.ವಿಜಯಕುಮಾರ ದುರ್ಗ, ಡಾ.ಸಂಗಶೆಟ್ಟಿ ಕಲ್ಯಾಣೆ, ಪ್ರೊ.ಬಿ.ಎಂ. ಪಾಟೀಲ್, ಪ್ರೊ.ಮಲ್ಲಿಕಾರ್ಜುನ ಹೊನ್ನಾ, ಸುಮಿತಕುಮಾರ, ಅಭಿಷೇಕ ಮೋರೆ, ಪವನ, ಸಂತೋಷ ತಪಸಾಳೆ, ಪ್ರೊ.ಪ್ರಹ್ಲಾದ ಎಸ್., ಪ್ರೊ.ಯೋಗೇಶ, ಡಾ.ರಾಜಶೇಖರ ಮಠಪತಿ, ಪ್ರೊ.ಗೀತಾ ಪಾಟೀಲ್, ಶಾಮಕುಮಾರ ಶಟಕಾರ ಇತರರಿದ್ದರು.
ಸ್ನೇಹಾ, ಗೀತಾ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಡಾ.ಪ್ರಶಾಂತ ಎಸ್. ವಂದಿಸಿದರು. ಉತ್ತಮ ಅಂಕ ಪಡೆದು ಉತ್ತೀರ್ಣರಾದ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಥಮೇಶ, ಶೇಖ್ ಮಜಹರ್ ಅಹ್ಮದ್ ಮತ್ತು ರಕ್ಷಿತಾ ಅವರನ್ನು ಸನ್ಮಾನಿಸಿ ಬಹುಮಾನ ನೀಡಲಾಯಿತು.
ಬಿಕೆಐಟಿ ಒಂದು ದೊಡ್ಡ ವಿಶ್ವವಿದ್ಯಾಲಯ ಆಗುವ ಕಾಲ ದೂರವಿಲ್ಲ. ಅದಕ್ಕೆ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಶ್ರಮ ಬೇಕಾಗಿದೆ.
| ಡಾ.ಬಸವರಾಜ ಗಾದಗೆ ಪ್ರಾದೇಶಿಕ ನಿರ್ದೇಶಕ, ವಿಟಿಯು ಕಲಬುರಗಿ