ಶುದ್ಧ ನೀರಿನ ಘಟಕಗಳು ಬಂದ್ - ಸಮಸ್ಯೆ ಉಲ್ಬಣಿಸದಂತೆ ಕ್ರಮವಹಿಸಬೇಕಿದೆ ಕಾರಟಗಿ ತಾಪಂ

ಸಿದ್ದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಆರ್‌ಒ ಪ್ಲಾಂಟ್ ಕೆಟ್ಟು ನಿಂತಿರುವುದು
Published on

ಶರಣಪ್ಪ ಕೃಷ್ಣಾಪುರ ಸಿದ್ದಾಪುರ
ಸದ್ಯ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ, ಕೆಲವೆಡೆ ಶುದ್ಧ ಜಲ ನೀಡುವ ಆರ್‌ಒ ಪ್ಲಾಂಟ್‌ಗಳು ಕೆಟ್ಟು ನಿಂತಿದ್ದರೆ, ಸಿದ್ದಾಪುರ ಸೇರಿ ಇತರ ಗ್ರಾಮಗಳಲ್ಲಿ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.

ಕಾರಟಗಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್ ಗಳಿವೆ. ಬೇಸಿಗೆ ಆರಂಭವಾಗಿದ್ದರೂ, ಸದ್ಯ ಪಟ್ಟಣದಲ್ಲಿ ನೀರಿನ ಬವಣೆ ಉಂಟಾಗಿಲ್ಲ. ನಗರ ವ್ಯಾಪ್ತಿಯಲ್ಲಿ ಒಟ್ಟು 145 ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಕಾಲುವೆಗೆ ನೀರು ಬಂದ್ ಮಾಡಿದ ಬಳಿಕ 21 ಹಾಗೂ 22ನೇ ವಾರ್ಡ್‌ಗೆ ಕೊಂಚ ನೀರಿನ ಸಮಸ್ಯೆ ಉಂಟಾಗಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಕೆಲ ವಾರ್ಡ್‌ಗಳಲ್ಲಿ ಪ್ರತಿದಿನ, ಇನ್ನು ಕೆಲವೆಡೆ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ.

ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ವಿವಿಧ ಗ್ರಾಮಕ್ಕೆ ನಿರೋದಗಿಸುವ ಸಿದ್ದಾಪುರ ಟ್ಯಾಂಕ್ ಹೊರನೋಟ.
ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ವಿವಿಧ ಗ್ರಾಮಕ್ಕೆ ನಿರೋದಗಿಸುವ ಸಿದ್ದಾಪುರ ಟ್ಯಾಂಕ್ ಹೊರನೋಟ.

ತಾಲೂಕು ವ್ಯಾಪ್ತಿಗೆ ಒಟ್ಟು 13 ಗ್ರಾಪಂಗಳು ಒಳಪಡುತ್ತವೆ. ಈ ಪೈಕಿ ಕೆಲ ಪಂಚಾಯಿತಿಗಳಲ್ಲಿ ಶುದ್ಧ ನೀರಿನ ಘಟಕಗಳು ಹಾಳಾಗಿವೆ. ಸಿದ್ದಾಪುರದಲ್ಲಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಲಾ ಒಂದು ಆರ್‌ಒ ಪ್ಲಾಂಟ್ ಕೆಟ್ಟು ನಿಂತಿದೆ. ಬರಗೂರು ಗ್ರಾಪಂನಲ್ಲಿ 10 ಲಕ್ಷ ರೂ. ವೆಚ್ಚ ಮಾಡಿ ಘಟಕ ಅಳವಡಿಸಲಾಗಿದೆ. ಆದರೆ, ಉದ್ಘಾಟನೆಗೂ ಮುನ್ನವೇ ಹಾಳಾಗಿದೆ. ಹೀಗಾಗಿ ಬರಗೂರು, ಕೊಟ್ನೇಕಲ್ ಗ್ರಾಮದ ಜನರು ಕುಡಿವ ನೀರಿಗೆ ಬೇರೆ ಊರುಗಳ ಮೇಲೆ ಅವಲಂಬಿಸಬೇಕಾಗಿದೆ. 56 ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 8 ಆರ್‌ಒ ಪ್ಲಾಂಟ್‌ಗಳು ನಿರುಪಯುಕ್ತವಾಗಿವೆ. ಇನ್ನು ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಹೊಳೆಯಿಂದ ವಿವಿಧ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಸಿದ್ದಾಪುರದಲ್ಲಿರುವ ವಾರ್ಡ್‌ಗಳಿಗೆ ಪ್ರತಿ ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಕೆಲವೊಮ್ಮೆ ವಿದ್ಯುತ್ ಸಮಸ್ಯೆಯಾದರೆ ನೀರಿನ ಬವಣೆ ಮತ್ತಷ್ಟು ಬಿಗಡಾಯಿಸುತ್ತದೆ. ಹೀಗಾಗಿ ಬೇಸಿಗೆ ಮತ್ತಷ್ಟು ಕಾವೇರುವ ಮುನ್ನವೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

ವಿವಿಧ ಗ್ರಾಮಕ್ಕೆ ನಿರೋದಗಿಸುವ ಬಹುಗ್ರಾಮ ಕುಡಿವ ನೀರು ಫಿಲ್ಟರ್ ಆಗುತ್ತಿರುವುದು
ವಿವಿಧ ಗ್ರಾಮಕ್ಕೆ ನಿರೋದಗಿಸುವ ಬಹುಗ್ರಾಮ ಕುಡಿವ ನೀರು ಫಿಲ್ಟರ್ ಆಗುತ್ತಿರುವುದು

ಇನ್ನೂ ನಡೆಯುತ್ತಲಿದೆ ಜೆಜೆಎಂ ಕಾಮಗಾರಿ

ಪ್ರತಿ ಗ್ರಾಮದ ಮನೆಗಳಿಗೆ ನೀರೊದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದೆ. ತಾಲೂಕು ವ್ಯಾಪ್ತಿಯಲ್ಲಿ ಮೊದಲ ಹಂತವಾಗಿ 2020-21ರ 52 ಕಾಮಗಾರಿಗಳ ಪೈಕಿ 37 ಪೂರ್ಣಗೊಂಡಿವೆ. 8 ಕಾಮಗಾರಿಗಳ ಡಿಪಿಆರ್ ಸಿದ್ಧಗೊಂಡಿದೆ. 6 ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ. ಒಂದು ಕಡೆ ಇನ್ನೂ ಆರಂಭವಾಗಿಲ್ಲ. ಎರಡನೇ ಹಂತದ 2021-22ರ 20 ಜೆಜೆಎಂ ಕಾಮಗಾರಿಗಳಲ್ಲಿ 9 ಮುಕ್ತಾಯವಾಗಿದ್ದು, 7 ಪ್ರಗತಿಯಲ್ಲಿವೆ. ಇನ್ನುಳಿದ 4 ಕಡೆ ಕಾರ್ಯ ಪ್ರಾರಂಭವಾಗಬೇಕಿದೆ. ಜೆಜೆಎಂ ಕಾಮಗಾರಿ ಬಗ್ಗೆ ಹಲವು ಆರೋಪಗಳು ಕೇಳಿಬಂದಿವೆ. ಕೆಲಸ ಸರಿಯಾಗಿ ಮಾಡಿಲ್ಲ, ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ ಎನ್ನುವುದು ಸೇರಿ ಇತರ ವಿಷಯಗಳ ಬಗ್ಗೆ ಗ್ರಾಪಂ, ತಾಪಂ, ಆರ್‌ಡಬ್ಲುೃಎಸ್ ಇಲಾಖೆಗೆ ಜನರಿಂದ ಅನೇಕ ದೂರುಗಳು ಸಲ್ಲಿಕೆಯಾಗಿವೆ. ತಾಲೂಕಿನ ಸಿದ್ದಾಪುರ, ಮೈಲಾಪುರ, ನಂದಿಹಳ್ಳಿ ಹಾಗೂ ಸಿಂಗನಾಳ ಗ್ರಾಮದಲ್ಲಿ ಕಾಮಗಾರಿ ಆರಂಭವಾಗಬೇಕಿದೆ. ಮೈಲಾಪುರದಲ್ಲಿ ಡಿಪಿಆರ್ ತಪ್ಪಾಗಿರುವ ಮರು ಟೆಂಡರ್ ಮಾಡಬೇಕಿದೆ. 10 ಕಿಮೀ ಪೈಪ್‌ಲೈನ್ ಕಾಮಗಾರಿಯನ್ನು 5 ಕಿಮೀ ಕಾಮಗಾರಿ ಎಂದು ನಮೂದಿಸಲಾಗಿದೆ. ಒಟ್ಟು 1100 ಮನೆಗಳ ಪೈಕಿ 350 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇನ್ನುಳಿದ ಮನೆಗಳಿಗೆ ಸಂಪರ್ಕ ಕಲ್ಪಿಸಲು ಗುತ್ತಿಗೆದಾರ ಹೆಚ್ಚುವರಿ ಹೊರೆಯಾಗುವ ಕಾರಣ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

ಕಾರಟಗಿ ತಾಲೂಕಿನ ಕೆಲವೆಡೆ ಆರ್‌ಒ ಪ್ಲಾಂಟ್‌ಗಳು ಕೆಟ್ಟಿವೆ. ಶೀಘ್ರವೇ ಅವುಗಳ ರಿಪೇರಿ ಕೆಲಸ ನಡೆಯಲಿದೆ. ಬಸವಣ್ಣ ಕ್ಯಾಂಪ್ ನಲ್ಲಿ ಮಾತ್ರ ನೀರಿನ ಸಮಸ್ಯೆ ಆಗುವ ಸಾಧ್ಯತೆಯಿದೆ. ಅದನ್ನು ಸಮರ್ಥವಾಗಿ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ಬೇಸಿಗೆಯಲ್ಲಿ ಯಾವುದೇ ಗ್ರಾಮಕ್ಕೆ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಹಿಸಲಾಗುವುದು.ನರಸಪ್ಪ, ತಾಪಂ ಇಒ, ಕಾರಟಗಿ

ಗ್ರಾಮದಲ್ಲಿ ಶುದ್ಧ ಕುಡಿವ ನೀರಿಗೆ ಸಮಸ್ಯೆಯಿಲ್ಲ. ಆದರೆ, ದಿನ ಬಳಕೆಯ ನೀರಿಗೆ ಸಮಸ್ಯೆಯಿದೆ. ಕಳೆದ ಒಂದು ವರ್ಷದ ಹಿಂದೆ ಆರಂಭವಾದ ಜೆಜೆಎಂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ಅಗೆದಿದ್ದರಿಂದ ಹಳೆಯ ಪೈಪ್‌ಲೈನ್‌ಗಳು ಡ್ಯಾಮೇಜ್ ಆಗಿವೆ. ಇವುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕು.ಶರಣಬಸವ ಯತ್ನಟ್ಟಿ ಹುಳ್ಕಿಹಾಳ ಗ್ರಾಮಸ್ಥ ಗ್ರಾಮದಲ್ಲಿ ಮಾಡಲಾದ ಜೆಜೆಎಂ ಕಾಮಗಾರಿ ಕಳೆಪೆಯಾಗಿದೆ. ಗುಣಮಟ್ಟದ ಸಾಮಗ್ರಿ ಬಳಕೆ ಮಾಡಿಲ್ಲ. ಅಲ್ಲದೆ, ಎಲ್ಲೆಂದರಲ್ಲಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ನೀರು ನಿಂತು ದುರ್ವಾಸನೆ ಹಾಗೂ ಸೊಳ್ಳೆ ಕಾಟ ಹೆಚ್ಚಿದೆ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು.ಮಾರುತೆಪ್ಪ ಮೈನಳ್ಳಿ, ಸಿದ್ದಾಪುರ ಗ್ರಾಮಸ್ಥ ಕಾರಟಗಿಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ರೀತಿಯಲ್ಲಿ ಕ್ರಮವಹಿಸಲಾಗಿದೆ. 145 ಬೋರ್‌ವೆಲ್‌ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹ ಜಲ ಸಮಸ್ಯೆ ಆಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ರೆಡ್ಡಿ ರಾಯನಗೌಡ, ಪುರಸಭೆ ಮುಖ್ಯಾಧಿಕಾರಿ, ಕಾರಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net