ಲೈಂಗಿಕ ಶೋಷಣೆಗೆ ತಡೆ ಅಗತ್ಯ

Freedom Walk Program
Freedom Walk Program vijayapura
Published on

ವಿಜಯವಾಣಿ ಸುದ್ದಿಜಾಲ ವಿಜಯಪುರ
ಹೆಣ್ಣು ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸುವಂತಹ ಕೃತ್ಯಗಳ ವಿರುದ್ಧ ಜನಜಾಗೃತಿ ಮೂಡಿಸಿ, ಸಮಾಜವನ್ನು ಎಚ್ಚರಿಸುವ ಅವಶ್ಯವಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರಿನ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಹೇಳಿದರು.
ಪಟ್ಟಣದ ರೋಟರಿ ಶಾಲೆಯಿಂದ ಹಮ್ಮಿಕೊಂಡಿದ್ದ ವಿಶ್ವ ಶಾಂತಿಗಾಗಿ ಸ್ವಾತಂತ್ರ್ಯ ನಡಿಗೆ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಂಡು ಮತ್ತು ಹೆಣ್ಣು ಮಕ್ಕಳನ್ನು ಅಪಹರಣ ಮಾಡಿ, ಅವರ ಅಂಗಾಂಗಗಳನ್ನು ಅಪಹರಿಸುವುದು, ದೂರದ ವಿವಿಧ ಸ್ಥಳಗಳಲ್ಲಿ ಭಿಕ್ಷೆ ಬೇಡಲು, ಬೇರೆ ಬೇರೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸುವುದಕ್ಕೆ ಕಡಿವಾಣ ಹಾಕಲು ಮಾನವ ಕಳ್ಳಸಾಗಣೆ ತಡೆಗಟ್ಟಿ ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಶ್ರೀ ಸಾಯಿ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಭಾರತಿ ಮಾತನಾಡಿ, ಬಡವರು, ಗ್ರಾಮೀಣ ಮಕ್ಕಳು ಮತ್ತು ಮಹಿಳೆಯರು ಕಳ್ಳಸಾಗಣೆ ಜಾಲಕ್ಕೆ ಸಿಲುಕುತ್ತಿದ್ದಾರೆ. ಸುತ್ತಮುತ್ತಲಿನ ಪರಿಚಯದ ವ್ಯಕ್ತಿಗಳಿಂದಲೇ ಈ ಕೃತ್ಯ ನಡೆಯುತ್ತಿದೆ. ಪಾಲಕರು, ಮಕ್ಕಳ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು. ಪಿಡುಗು ತಡೆಗಟ್ಟುವುದು ಸಮಾಜದಲ್ಲಿ ಎಲ್ಲರ ಕರ್ತವ್ಯ ಎಂದರು.
ರೋಟರಿ ಅಧ್ಯಕ್ಷೆ ಮಂಜುಳಾ ಮಾತನಾಡಿ, ಶಾಲಾ ವಿದ್ಯಾರ್ಥಿಗಳು ಪರಸ್ಪರ ವಿಚಾರಗಳನ್ನು ಹಂಚಿಕೆ ಮಾಡಿಕೊಳ್ಳಬೇಕು. ಅಪರಿಚಿತರು ನಿಮಗೆ ಏನೇ ವಸ್ತು ಕೊಟ್ಟರೆ ಮುಟ್ಟಬಾರದು. ಮಕ್ಕಳ ಅಪಹರಣಗಳ ಕುರಿತು ಪ್ರತಿಯೊಬ್ಬರೂ ಎಚ್ಚರವಾಗಿರಬೇಕು ಎಂದರು.
ವಿದ್ಯಾರ್ಥಿಗಳು ಬಿತ್ತಿಪತ್ರ ಹಿಡಿದು, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಮಾನವ ಕಳ್ಳ ಸಾಗಣೆ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿದರು. ರೋಟರಿ ಮಾಜಿ ಕಾರ್ಯದರ್ಶಿ ಎಸ್.ಮಹೇಶ್, ಶಿಕ್ಷಕರಾದ ಕಲಾವತಿ, ಮಂಜುಳಾ, ಸಮುದಾಯ ಆರೋಗ್ಯ ಕೇಂದ್ರದ ದಾದಿ ಸುನೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net