ನರಗುಂದ: ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನಬದ್ಧ ಸ್ಥಾನದಲ್ಲಿ ಕುಳಿತುಕೊಂಡು ಸಂವಿಧಾನ ಸೃಷ್ಟಿಕರ್ತನ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಪ್ರವೀಣ ಸಂಗಳದಶೆಟ್ಟರ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ದೇಶದ ಜನಸಾಮಾನ್ಯರಿಗೆ ಮೂಲಭೂತ ಹಕ್ಕುಗಳನ್ನು ಕೊಟ್ಟು ಬದುಕಲು ಸ್ವಾತಂತ್ರ ಕೊಟ್ಟಿದ್ದು ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಹೊರತು ಅಮಿತ್ ಶಾ ಅವರಲ್ಲ. ಕಾಂಗ್ರೆಸ್ ನನ್ನ ಹೇಳಿಕೆಯನ್ನು ತಿರುಚಿದೆ ಎಂಬುದು ಅವರ ಅಸಹಾಯಕತೆ ತೋರಿಸುತ್ತದೆ. ಅಂಗೈಹುಣ್ಣಿಗೆ ಕನ್ನಡಿ ಬೇಕಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸಂಸತ್ತಿನಲ್ಲಿ ದೇಶವೇ ತಲೆ ತಗ್ಗಿಸುವಂತೆ ಮಾತನಾಡಿದ ವ್ಯಕ್ತಿ ಕ್ಷಮೆಗೂ ಅರ್ಹರಲ್ಲ ಎಂದು ಸಂಗಳದ ಶೆಟ್ಟರ ಹೇಳಿದ್ದಾರೆ.