ದೇಶಭಕ್ತರ ತ್ಯಾಗದ ಫಲವೇ ‘ಸ್ವಾತಂತ್ರ್ಯ’

6
Published on

ಭಾರತ ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆಯುವ ಜತೆಗೆ ವಿಶ್ವಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನವನ್ನು ಆಡಳಿತಾತ್ಮಕವಾಗಿ ಅಳವಡಿಸಿಕೊಂಡು ತನ್ಮೂಲಕ ಇಡೀ ಪ್ರಪಂಚಕ್ಕೆ ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯವನ್ನು ತಿಳಿಸಿಕೊಟ್ಟ ಕೀರ್ತಿಗೂ ಭಾಜನವಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ತಾಲೂಕಿನ ಸಿಂಧುವಳ್ಳಿಯ ಶ್ರೀ ಮಹದೇಶ್ವರ ಪ್ರೌಢಶಾಲೆ ವತಿಯಿಂದ ಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶದಲ್ಲಿ ಬೇಕಾದಷ್ಟು ಹಬ್ಬ-ಹರಿದಿನಗಳುಂಟು. ಆದರೆ ಆಗಸ್ಟ್ 15ರ ‘ಸ್ವಾತಂತ್ರ್ಯೋತ್ಸವ ದಿನ’ ಮತ್ತು ಜನವರಿ 26ರ ‘ಗಣರಾಜ್ಯೋತ್ಸವ ದಿನ’ ಇವೆರಡೂ ದೇಶದ ಪ್ರತಿಯೊಬ್ಬರೂ ಆಚರಿಸುವ, ಆಚರಿಸಲೇಬೇಕಾದ ರಾಷ್ಟ್ರೀಯ ಹಬ್ಬಗಳಾಗಿವೆ ಎಂದರು.
ಪ್ರಗತಿಯ ಅಮೃತ ಪಥದಲ್ಲಿ ಸಾಗಿರುವ ಭಾರತಕ್ಕೆ ಸುಖಾಸುಮ್ಮನೆ ಅಷ್ಟು ಸುಲಭಕ್ಕೆ ಸ್ವಾತಂತ್ರ್ಯ ಬಂದದ್ದಲ್ಲ. ಇದಕ್ಕೆ ಲಕ್ಷಾಂತರ ದೇಶಭಕ್ತರು, ದೇಶಪ್ರೇಮಿಗಳು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನ, ಹೋರಾಟ ಸಮರ್ಪಣೆಯಾಗಿದ್ದು ಇದರ ಫಲವೇ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಅಮೃತ ಫಲ ಎಂದರು.

ಬಲಿದಾನಗೈದ ಇಂಥ ತ್ಯಾಗಿಗಳೆಲ್ಲರ ಪ್ರಾಣವಾಗಿರುವ, ಬೆಲೆ ಕಟ್ಟಲಾಗದ ಸ್ವತಂತ್ರ ಭಾರತದ ಶಕ್ತಿ ಮತ್ತು ಮಹತ್ವವನ್ನು ಅರಿತು ನಾವಿಂದು ದೇಶ ಕಟ್ಟಬೇಕಾಗಿದೆ. ಪ್ರಸ್ತುತ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ದೇಶದ ಏಕತೆ, ಸೌಹಾರ್ದ, ಸಾಮರಸ್ಯ, ಭಾವೈಕ್ಯದಿಂದ ನಾವೆಲ್ಲರೂ ಒಂದೇ ಭಾರತ ಮಾತೆಯ ಮಕ್ಕಳಾಗಿ ಬಾಳುವೆವು ಹಾಗೂ ಇದನ್ನು ದೇಶದಲ್ಲಿ ಕಾಪಾಡಿಕೊಂಡು ಹೋಗುತ್ತೇವೆಂಬ ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು. ಶ್ರೀ ಮಹದೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಗುರುಸ್ವಾಮಿ ಮಾತನಾಡಿದರು. ಗೌರವಾಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ಎಸ್.ಸುನೀಲ್ ಕುಮಾರ್, ಸದಸ್ಯರಾದ ಎಸ್. ಮೌನಶ್ರೀ ಗುರುಸ್ವಾಮಿ, ಎಂ.ಕವಿತಾ, ಎಸ್.ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net