

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಉಜ್ವಲ ಭವಿಷ್ಯ ನಿರ್ಧರಿಸುವಲ್ಲಿ ವಿದ್ಯಾರ್ಥಿಗಳಿಗೆ ಇತಿಹಾಸ ಪ್ರಜ್ಞೆ ಅಗತ್ಯ. ಇತಿಹಾಸವು ಹೋರಾಟಗಳ ಅನುಭವದ ಕಥೆಯಾಗಿದೆ ಎಂದು ಪದವಿ ಪೂರ್ವ ಶಾಲಾ ಶಿಕ್ಷಣ ಉಪ ನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣಕರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅಖಂಡ ಧಾರವಾಡ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಾರರು' ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲಾಽಕಾರಿಗಳ ಮಾರ್ಗದರ್ಶನದಲ್ಲಿ ಇಲಾಖೆಯಿಂದ ಅಖಂಡ ಧಾರವಾಡ ಜಿಲ್ಲೆಯ 77 ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ 45 ಉಪನ್ಯಾಸಕರಿಂದ ಸ್ವಾತಂತ್ರ‍್ಯ ಹೋರಾಟಗಾರರ ಯಶೋಗಾಥೆಯನ್ನು ಸ್ಮರಿಸುವ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ವಿಜ್ಞಾನ ಓದುವ ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ದೇಶದ ಸ್ವಾತಂತ್ರ‍್ಯ ಹೋರಾಟ ಹಾಗೂ ಏಕೀಕರಣಕ್ಕಾಗಿ ಸಂಘದ ಸೇವೆ ಸ್ಮರಣೀಯವಾಗಿದೆ. ಇಲಾಖೆಯ ರಚನಾತ್ಮಕ ಕಾರ್ಯಕ್ರಮಕ್ಕೆ ಸಂಘದ ಸಹಕಾರ ಇದೆ ಎಂದರು.
ಗ್ರ0ಥ ಸಂಪಾದಕ ಡಾ. ಪ್ರಕಾಶ ಸುಣಗಾರ ಮಾತನಾಡಿ, ಈ ಕೃತಿ ಸ್ಥಳೀಯ ಸ್ವಾತಂತ್ರ‍್ಯ ಹೋರಾಟಗಾರರು, ಹೋರಾಟದ ಗ್ರಾಮಗಳು ಹಾಗೂ ಸ್ಮಾರಕಗಳನ್ನು ಗಮನದಲ್ಲಿರಿಸಿ ರಚಿಸಲಾಗಿದೆ ಎಂದರು.
ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಉದಯ ನಾಯಕ, ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ ಮಾತನಾಡಿದರು. ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಡಾ. ಚಂದ್ರಶೇಖರ ರೊಟ್ಟಿಗವಾಡ, ವಿಜಯಕುಮಾರ ಮಾನೆ, ಉಮೇಶ ಮುನವಳ್ಳಿ, ಎಂ.ಪಿ. ಬಾರಕೇರ, ಲಕ್ಷ್ಮೀ ಕಣವಿ, ಇತರರಿದ್ದರು.
ಪ್ರೊ. ಹೇಮಂತ ಕರ್ಜಗಿ ನಿರೂಪಿಸಿದರು. ಬಿ.ವಿ. ನದಾಫ ವಂದಿಸಿದರು.