ರಾಜಧಾನಿಯ ಉದ್ಯಾನದಲ್ಲಿ ಉಚಿತ ವೈಫೈ!

WiFi Park
Published on

ಬೆಂಗಳೂರು: ಹೋಟೆಲ್​ನಲ್ಲಿ, ಮಾಲ್​ನಲ್ಲಿ, ಬಸ್​ನಲ್ಲಿ, ರೈಲಲ್ಲಿ ಉಚಿತ ವೈಫೈ ಕೊಡುವುದನ್ನು ಕೇಳಿದ್ದೀರಿ. ಆದರೆ ಇಲ್ಲೀಗ ಉದ್ಯಾನದಲ್ಲೂ ಉಚಿತ ವೈಫೈ ಸಿಗುತ್ತಿದೆ. ಈ ಮೂಲಕ ಪಾರ್ಕ್​ನಲ್ಲಿ ಸುಮ್ಮನೆ ಅಡ್ಡಾಡುವವರಿಗೆ ಉಚಿತವಾಗಿಯೇ ಅಂತರ್ಜಾಲವನ್ನು ಜಾಲಾಡುವ ಅವಕಾಶವೂ ಸಿಗಲಿದೆ.

ಮಲ್ಲೇಶ್ವರದ ಸ್ಯಾಂಕಿ ಕೆರೆ ಸಮೀಪದಲ್ಲಿ ಗೋಕಾಕ್ ಚಳವಳಿಯ ಸ್ಮರಣಾರ್ಥ ವೃತ್ತದ ಉದ್ಯಾನವನದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಆ್ಯಕ್ಟ್ ಫೈಬರ್ ನೆಟ್‌ನಿಂದ ಮಾಡಲಾಗಿರುವ ಉಚಿತ ವೈಫೈ ವ್ಯವಸ್ಥೆಗೆ ಚಾಲನೆ ನೀಡಿದರು.

ಮಲ್ಲೇಶ್ವರದ ಭಾಗದ ಜನರ ಅಚ್ಚುಮೆಚ್ಚಿನ ತಾಣವಾಗಿರುವ ಈ ಉದ್ಯಾನವನ್ನು ಈ ಮೊದಲೇ ಡಿಸಿಎಂ ಅವರು ಉತ್ತಮವಾಗಿ ಅಭಿವೃದ್ಧಿಪಡಿಸಿದ್ದರು. ಇದೀಗ ಈ ಉದ್ಯಾನವನಕ್ಕೆ ಮತ್ತಷ್ಟು ಹೈಟೆಕ್ ಮೆರಗು ಬಂದಿದೆ. ಗೋಕಾಕ್ ಚಳವಳಿಯ ಇತಿಹಾಸದ ಸ್ಪರ್ಶ ನೀಡಲಾಗಿದೆ. ಅದೀಗ ಹಸಿರು-ಕೆಂಪು ಬಣ್ಣಗಳ ಥೀಮಿನೊಂದಿಗೆ ಕಂಗೊಳಿಸುತ್ತಿದೆ.

ಈ ಉದ್ಯಾನವದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಆ್ಯಕ್ಟ್ ಫೈಬರ್‌ನೆಟ್ ಉಪಕ್ರಮವನ್ನು ಶ್ಲಾಘಿಸಿದರಲ್ಲದೆ, ಮತ್ತಷ್ಟು ಖಾಸಗಿಯವರು ಮುಂದೆ ಬಂದು ಇನ್ನಷ್ಟು ಉದ್ಯಾನವನಗಳನ್ನು ನಿರ್ವಹಿಸುವಂತಾಗಬೇಕು. ಆಗ ಉದ್ಯಾನಗಳು ಮತ್ತಷ್ಟು ನಳನಳಿಸುತ್ತ ನಗರಕ್ಕಿರುವ ‘ಉದ್ಯಾನವನಗಳ ನಗರಿ’ ಎಂಬ ಹೆಸರು ಸಾರ್ಥಕವಾಗುತ್ತದೆ ಎಂದರು. ಆ್ಯಕ್ಟ್ ಫೈಬರ್‌ನೆಟ್ ಸಂಸ್ಥೆ ಉಪಾಧ್ಯಕ್ಷ ಸುನೀಲ್ ಯಜಮಾನ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಉದ್ಯಾನವನದಲ್ಲಿ ಏನೇನಿದೆ? ಈ ಉದ್ಯಾನದಲ್ಲಿ ಕನ್ನಡದ ಹಲವಾರು ಆಕೃತಿಗಳು, ಫಲಕಗಳನ್ನು ಅಳವಡಿಸಲಾಗಿದೆ. ಕನ್ನಡಿಗರಿಗೆ ಇಷ್ಟವಾಗುವುದರ ಜತೆಗೆ, ಇತಿಹಾಸಕಾರರಿಗೂ ಹೇಳಿ ಮಾಡಿಸಿದ ಅಧ್ಯಯನ ತಾಣವಾಗಿದೆ. ಜತೆಗೆ, ವಾಯುವಿಹಾರಕ್ಕೆ ಬರುವವರಿಗೆ ಉಚಿತ ವೈಫೈ ನೀಡಲಾಗುತ್ತಿದ್ದು, ಅದರ ವೇಗ 100 ಎಂಬಿಪಿಎಸ್ ಇರುತ್ತದೆ. ಬರುವವರು ತಮ್ಮ ಹೆಸರು ನೋಂದಾಯಿಸಿಕೊಂಡು ವೈಫೈಗೆ ಲಾಗಿನ್ ಆಗಬಹುದು. 45 ನಿಮಿಷ ಈ ಸೇವೆ ಬಳಸಿಕೊಳ್ಳಬಹುದು. ಮಕ್ಕಳ ಚಟುವಟಿಕೆಗಳಿಗೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ರಜಾ ದಿನಗಳಲ್ಲಿ ಚಿತ್ರ ರಚನೆ, ಕಥೆ ಹೇಳುವುದು, ನಟನೆ ಕಲಿಕೆ, ಮಡಕೆ ಮಾಡುವುದು ಸೇರಿ ಹಲವಾರು ಕಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುವುದು. ಇದೀಗ ಉದ್ಯಾನವನದ ನಿರ್ವಹಣೆಯನ್ನು ಬಿಬಿಎಂಪಿಯಿಂದ ಆ್ಯಕ್ಟ್ ಫೈಬರ್‌ನೆಟ್ ಸಂಸ್ಥೆಗೆ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net