

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಶ್ರವಣ ದೋಷ ಇರುವ 500 ಮಕ್ಕಳಿಗೆ ಉಚಿತ ಚಿಕಿತ್ಸೆ ಕೊಡಿಸುವ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದ್ದು, ಪ್ರತಿ ಮಗುವಿನ ಚಿಕಿತ್ಸೆಯ ವೆಚ್ಚ 5 ಲಕ್ಷ ರೂ.ಗಳನ್ನು ಸರ್ಕಾರವೇ ಭರಿಸಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ವಿಕಲಚೇತನರ ಸಂಘಟನೆಯ 15ನೇ ವಾರ್ಷಿಕೋತ್ಸವ ಮತ್ತು ಅಂಗವಿಕಲರಿಗಾಗಿ ಉಚಿತ ಆರೋಗ್ಯ ತಪಾಸಣೆ, ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸ್ವತಃ ಅಂಗವಿಕಲರನ್ನು ದಿವ್ಯಾಂಗರು ಎಂಬುದಾಗಿ ಕರೆದಿದ್ದಾರೆ. ಜತೆಗೆ ಸ್ವಾವಲಂಬಿ ಜೀವನ ನಡೆಸುವುದಕ್ಕೆ ಪೂರಕವಾದ ನಾನಾ ಸವಲತ್ತುಗಳನ್ನು ಒದಗಿಸುತ್ತಿದ್ದು, ಈಗಾಗಲೇ ರಾಜ್ಯ ಸರ್ಕಾರವು ಮಾಸಾಶನ ಹೆಚ್ಚಿಸಿದೆ ಎಂದರು.
2017ರಲ್ಲಿ ವೈಯಕ್ತಿಕವಾಗಿ 108 ಅಂಗವಿಕಲರಿಗೆ ಒಂದೇ ಬಾರಿಗೆ ತ್ರಿಚಕ್ರ ವಾಹನ ವಿತರಣೆಯು ಖುಷಿ ತಂದಿದೆ. ಹಾಗೆಯೇ ಮುಂಬರುವ ದಿನಗಳಲ್ಲೂ ಅಂಗವಿಕಲರ ಹಿತ ಕಾಪಾಡಲಿದ್ದು, ತ್ವರಿತವಾಗಿ ಆರೋಗ್ಯ ಶಿಬಿರ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
2020ರ ಟೋಕಿಯೋ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ದೇಶದ ಅಂಗವಿಕಲರು 19 ಪದಕ ಪಡೆಯುವ ಮೂಲಕ ಮೆಚ್ಚುಗೆಗೆ ಪಾತ್ರವಾದರು. ಅಷ್ಟಾವಕ್ರ ಎಂಬ ಮಹಾನ್ ಋಷಿಯು ಎಂಟು ದೈಹಿಕ ನ್ಯೂನತೆಗಳನ್ನು ಹೊಂದಿದ್ದರೂ ಪೂಜನೀಯರಾಗಿದ್ದರು. ಇನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಅಂಗವಿಕಲರು ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಹಾಗೆಯೇ ಈಗಲೂ ಬೆಳಕಿಗೆ ಬಾರದವರೂ ಸಹ ಆತ್ಮವಿಶ್ವಾಸದಲ್ಲಿ ವಿಶಿಷ್ಟ ಸಾಧನೆ ತೋರಬೇಕು ಎಂದರು.
ಕರ್ನಾಟಕ ವಿಕಲಚೇತನರ ಸಂಘಟನೆ ಅಧ್ಯಕ್ಷ ಕೆ.ವಿ.ಸುಬ್ರಮಣ್ಯಂ ಮಾತನಾಡಿ, ಸಂಘಟನೆಯು ಅಂಗವಿಕಲರ ಕಲ್ಯಾಣಕ್ಕಾಗಿ ಹಲವು ವರ್ಷಗಳಿಂದಲೂ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್ಪಿ ಡಿ.ಎಲ್.ನಾಗೇಶ್, ಕರ್ನಾಟಕ ವಿಕಲಚೇತನರ ಸಂಘಟನೆ ಉಪಾಧ್ಯಕ್ಷ ಜಿ.ವಿ.ವೆಂಕಟಶಿವಪ್ಪ, ಕಾರ್ಯದರ್ಶಿ ಬಿ.ಕಿರಣ್ ನಾಯಕ್, ಖಜಾಂಚಿ ಸೌಭಾಗ್ಯಮ್ಮ, ಸಂಚಾಲಕಿ ಕೆ.ಸಿ.ಮಮತಾ, ಮುಖಂಡರಾದ ಆರ್.ಚಂದ್ರಶೇಖರ್, ಎಂ.ಮುನಿರಾಜು, ಕೆ.ವಿ.ಸುಶೀಲಮ್ಮ, ಎಚ್.ಎಸ್.ಕೃಷ್ಣಪ್ಪ, ಎಸ್.ಮಂಜುನಾಥ್, ಆದಿನಾರಾಯಣಪ್ಪ, ವೆಂಕಟರಮಣಪ್ಪ, ನರಸಿಂಹಮೂರ್ತಿ, ಬಾಬಾಜಾನ್ ಮತ್ತಿತರರು ಇದ್ದರು.
ಸನ್ಮಾನ, ಪುರಸ್ಕಾರ: ಸಂಘಟನೆಯಿಂದ ಅಂಗವಿಕಲರ ಆರೋಗ್ಯ ತಪಾಸಣೆ, ಉದ್ಯೋಗ ಮೇಳ, ಸಾಧನ ಸೌಕರ್ಯಗಳಿಗಾಗಿ ಫಲಾನುಭವಿಗಳ ಹೆಸರು ನೋಂದಣಿ ನಡೆಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತರಿಗೆ, ಆದರ್ಶ ಅಂಗವಿಕಲ ದಂಪತಿಗಳನ್ನು ಸನ್ಮಾನಿಸಲಾಯಿತು. ಇದೇ ಅಂಗವಿಕಲರಿಗೆ ಸಿಗುತ್ತಿರುವ ಸರ್ಕಾರಿ ಸವಲತ್ತುಗಳ ಕುರಿತು ಜಾಗೃತಿ ಮೂಡಿಸಲಾಯಿತು.